ಬಿಗ್ಬಾಸ್ ಖ್ಯಾತಿಯ ಅನುಪಮಾ ಗೌಡ ಅದಕ್ಕೂ ಮುನ್ನ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೂ ಅವರಿಗೆ ಹೇಳಿಕೊಳ್ಳುವಂತ ಬ್ರೇಕ್ ಸಿಕ್ಕಿರಲಿಲ್ಲ. 'ಅಕ್ಕ' ಧಾರಾವಾಹಿಯಲ್ಲಿ ನಟಿಸಿದ ನಂತರ ಅನುಪಮಾ ಅವರನ್ನು ಎಲ್ಲರೂ ಗುರುತಿಸಲು ಆರಂಭಿಸಿದರು.
ಬಿಗ್ಬಾಸ್... ಅಕ್ಕ ಖ್ಯಾತಿಯ ಅನುಪಮಾಗೆ ಬಂಪರ್... ಗೌಡಗೆ ಒಲಿದ ಆ ಲಕ್ ಏನು?
ನಟಿ ಅನುಪಮಾ ಗೌಡ 'ದಿ ಫಾಲನ್' ಎಂಬ ಕಿರುಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಊರ್ವಿ ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ವರ್ಮಾ ಈ ಕಿರುಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಆದರೆ ಅನುಪಮಾ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದೇ ತಡ ಅವರ ಅದೃಷ್ಟ ಖುಲಾಯಿಸಿತು ಎಂದೇ ಹೇಳಬಹುದು. ಈ ರಿಯಾಲಿಟಿ ಶೋಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡಾ ಬಂದದ್ದು ಅನುಪಮಾ ಅವರಿಗೆ ನಿಜಕ್ಕೂ ಲಕ್ ತಂದುಕೊಟ್ಟಿತು. ಅಲ್ಲಿಂದ ಹೊರಬಂದ ನಂತರ ಈ ಮಾತಿನ ಮಲ್ಲಿಗೆ 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂತು. ಈ ಸಿನಿಮಾದಲ್ಲಿ ಜೆಕೆ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದಯಾಳ್ ಅವರೇ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ನಂತರ ರಾಘವೇಂದ್ರ ರಾಜ್ಕುಮಾರ್ ಮಗಳ ಪಾತ್ರದಲ್ಲಿ 'ತ್ರಯಂಬಕಂ' ಸಿನಿಮಾದಲ್ಲಿ ಅನುಪಮಾ ಮಿಂಚಿದರು.
ಇದೀಗ ಅವರು 'ದಿ ಫಾಲನ್' ಎಂಬ ಹಿಂದಿ ಕಿರುಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಈ ಕಿರುಚಿತ್ರ 4000 ವರ್ಷಗಳ ಹಿಂದಿನ ಕಥೆಯನ್ನು ನೆನಪಿಸುತ್ತದೆ. 'ಊರ್ವಿ' ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ವರ್ಮಾ ಈ ಕಿರುಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲೇಹ್, ಲಡಾಕ್ , ಮನಾಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಫೋಟೋಶೂಟ್ ಮಾಡಲಿದ್ದಾರಂತೆ ಪ್ರದೀಪ್. ಅನುಪಮಾಗೆ ಹಿಂದಿ ಭಾಷೆ ಗೊತ್ತಿರುವುದರಿಂದ ಈ ಕಿರುಚಿತ್ರದಲ್ಲಿ ನಟಿಸಲು ಸುಲಭವಾಗಿದೆಯಂತೆ. ಇನ್ನು ಈ ಚಿತ್ರದಲ್ಲಿ ಕೇವಲ 4 ಪಾತ್ರಗಳು ಮಾತ್ರ ಇರಲಿದ್ದು 30 ದಿನಗಳ ಚಿತ್ರೀಕರಣ ಜರುಗಲಿದೆ ಎಂದು ನಿರ್ದೇಶಕ ಪ್ರದೀಪ್ ತಿಳಿಸಿದ್ದಾರೆ.