ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗುರುವಾರ ಅಗಲಿದ ತಮ್ಮ ಸ್ನೇಹಿತ, ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರಿಗೆ ಐ ಫಾರ್ ಇಂಡಿಯಾ ಸಂಗೀತ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದ್ದಾರೆ.
ಭಾನುವಾರ ನಡೆದ ಐ ಫಾರ್ ಇಂಡಿಯಾ ಸಂಗೀತಗೋಷ್ಠಿ ಫೇಸ್ಬುಕ್ ನೇರಪ್ರಸಾರದಲ್ಲಿ ಅಮಿತಾಬ್ ಬಚ್ಚನ್, ತಮ್ಮ ನಿವಾಸದಿಂದಲೇ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಸಹನಟ, ಆತ್ಮೀಯ ಸ್ನೇಹಿತ ರಿಷಿ ಕಪೂರ್ಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. 5:36 ಅವಧಿಯ ಈ ವಿಡಿಯೋದಲ್ಲಿ ಅಮಿತಾಬ್ ಬಚ್ಚನ್ ತಮ್ಮ ಪ್ರೀತಿಯ ಚಿಂಟು ಅಲಿಯಾಸ್ ರಿಷಿ ಕಪೂರ್ ಅವರನ್ನು ನೆನೆದರು. ಈ ವೇಳೆ ಅವರ ಕಣ್ಣಂಚು ಒದ್ದೆಯಾಗಿತ್ತು.
ಈ ವೇಳೆ ಹಿರಿಯ ನಟ ರಾಜ್ಕಪೂರ್ ಅವರ ಮನೆಯಲ್ಲಿ ಮೊದಲ ಬಾರಿಗೆ ರಿಷಿ ಕಪೂರ್ ಅವರನ್ನು ನೋಡಿದ ಕ್ಷಣವನ್ನು ಅವರು ನೆನಪಿಸಿಕೊಂಡರು. ಅಲ್ಲದೆ ರಿಷಿ ಅವರು ಥೇಟ್ ತಾತ ಪೃಥ್ವಿರಾಜ್ಕಪೂರ್ ಅವರಂತೆ ನಡೆಯುತ್ತಿದ್ದರು ಎಂದು ಹೇಳಿದರು. ಅಲ್ಲದೆ ಅವರೊಂದಿಗೆ ನಟಿಸಿದ 'ಅಮರ್ ಅಕ್ಬರ್ ಆಂಥೋನಿ', 'ನಸೀಬ್', 'ಕಭಿ ಕಭಿ' ಮತ್ತು ಇತ್ತೀಚೆಗೆ ಬಿಡುಗಡೆಯಾದ '102 ನಾಟ್ ಔಟ್' ಚಿತ್ರಗಳಲ್ಲಿ ರಿಷಿ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ಕೂಡಾ ನೆನೆದರು.
ಬಹಳ ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ 67 ವರ್ಷದ ರಿಷಿ ಕಪೂರ್, ಗುರುವಾರ ಮುಂಬೈನ ಸರ್ ಹೆಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆ ದಿನ ರಿಷಿ ನಿಧನದ ವಾರ್ತೆಯನ್ನು ಕೂಡಾ ಅಭಿಮಾನಿಗಳಿಗೆ ಮೊದಲು ತಿಳಿಸಿದ್ದು ಅಮಿತಾಬ್ ಬಚ್ಚನ್ ಅವರೇ.