ಮುಂಬೈ:ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹೊಸ ಸಿನಿಮಾ ಝುಂಡ್ ಇದೇ ವರ್ಷದ ಜೂನ್ 18ರಂದು ತೆರೆಗೆ ಅಪ್ಪಳಿಸಲಿದೆ ಎಂದು ಸ್ವತಃ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ, ಅಭಿಮಾನಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದ್ದಾರೆ.
'ಕೋವಿಡ್ನಿಂದ ಹಿನ್ನಡೆಯಾಗಿತ್ತು. ಆದರೆ ನಾವು ಕಂಬ್ಯಾಕ್ ಮಾಡಿದ್ದೇವೆ. ನಾವು ಚಿತ್ರಮಂದಿರಗಳಿಗೆ ಮರಳಿದ್ದೇವೆ. ಝುಂಡ್ ಜೂನ್ 18ಕ್ಕೆ ಬಿಡುಗಡೆಯಾಗಲಿದೆ' ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವೀಟಿಸಿದ್ದಾರೆ.
ಸೈರಾಟ್ ಸಿನಿಮಾದ ನಾಗರಾಜ್ ಮಂಜುಳೆ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾ ಟ್ರೇಡ್ ಅನಾಲಿಸ್ಟ್ ತರನ್ ಆದರ್ಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಜೂನ್ 18ರಂದು ಸಿನಿಮಾ ಬಿಡುಗಡೆಯನ್ನು ಇನ್ನೊಮ್ಮೆ ಖಚಿತಪಡಿಸಿದ್ದಾರೆ.
ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಲಮ್ ಸಾಕರ್ ಎಂಬ ಸಂಘಟನೆ ಸೃಷ್ಟಿಸಿದ ವಿಜಯ್ ಬರ್ಸೆ ಎಂಬ ಸಾಧಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಓರ್ವ ಪ್ರೊಫೆಸರ್ ಯಾವ ರೀತಿಯಲ್ಲಿ ಬಡ ಮಕ್ಕಳಿಗೆ ಫುಟ್ಬಾಲ್ ತಂಡ ಕಟ್ಟಲು ನೆರವು ನೀಡುತ್ತಾನೆ ಎಂಬ ಕಥೆ ಹೊಂದಿದೆ.