ಮುಂಬೈ:ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಮಿತಾಬ್, ಅಭಿಷೇಕ್ ಬಚ್ಚನ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ವೈದ್ಯರು - ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಅಮಿತಾಬ್ ಬಚ್ಚನ್
ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಆರೋಗ್ಯ ಸ್ಥಿರವಾಗಿದ್ದು ಇನ್ನೂ 7 ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಇರಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
44 ವರ್ಷದ ಅಭಿಷೇಕ್ ಬಚ್ಚನ್ ಹಾಗೂ 77 ವರ್ಷ ವಯಸ್ಸಿನ ಅಮಿತಾಬ್ ತಮಗೆ ಕೊರೊನಾ ದೃಢವಾಗಿರುವುದಾಗಿ ಜುಲೈ 11 ರಂದು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದರು. ನಂತರ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ. ಇಬ್ಬರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನೂ 7 ದಿನಗಳ ಕಾಲ ಇಬ್ಬರೂ ಆಸ್ಪತ್ರೆಯಲ್ಲಿ ಇರಬೇಕಿದೆ ಎಂದು ಆಸ್ಪತ್ರೆ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಮಿತಾಬ್ ಹಾಗೂ ಅಭಿಷೇಕ್ ಜೊತೆ 46 ವರ್ಷದ ಐಶ್ವರ್ಯ ರೈ ಹಾಗೂ 8 ವರ್ಷದ ಆರಾಧ್ಯಗೆ ಕೂಡಾ ಕೋವಿಡ್ ದೃಢವಾಗಿದ್ದು ಇಬ್ಬರೂ ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮಿತಾಬ್ ಹಾಗೂ ಕುಟುಂಬ ಬೇಗ ಗುಣಮುಖವಾಗಲೆಂದು ಅಭಿಮಾನಿಗಳು ದೇವರನ್ನು ಪ್ರಾರ್ಥಿಸುತ್ತಿದ್ದು ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ, ನಿಮ್ಮ ಅಭಿಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಅಮಿತಾಬ್ ಧನ್ಯವಾದ ಅರ್ಪಿಸಿದ್ದಾರೆ. ಇನ್ನು ಅಮಿತಾಬ್ ಬಂಗಲೆಯಲ್ಲಿ ಸುಮಾರು 26 ಮಂದಿ ಕೆಲಸ ಮಾಡುತ್ತಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.