ರಾಜ್ಕುಮಾರ್ ಹಿರಾನಿ ನಿರ್ದೇಶನದ ಸಂಜಯ್ ದತ್ ಅವರ ಬಯೋಪಿಕ್ 'ಸಂಜು ಚಿತ್ರ' ಬಿಡುಗಡೆಯಾಗಿ ಮೂರು ವರ್ಷಗಳಾಗಿವೆ. 2018ರಲ್ಲಿ ಸರಿಯಾಗಿ ಇದೇ ದಿನ ಈ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿತ್ತು.
ಈ ಚಿತ್ರದಲ್ಲಿ ಪ್ರಮುಖವಾಗಿ ತಂದೆ-ಮಗನ ಬಾಂಧವ್ಯದ ಕಥೆ ಇದ್ದು, ಮಗನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸಿದ್ದರು. ಅಪ್ಪನ ಪಾತ್ರದಲ್ಲಿ ಪರೇಶ್ ರಾವಲ್ ಕಾಣಿಸಿಕೊಂಡಿದ್ದರು. ಆದರೆ, ಪರೇಶ್ ರಾವಲ್ ಮಾಡಿದ ಪಾತ್ರವನ್ನು ಯಾರು ಮಾಡಬೇಕಾಗಿತ್ತು ಗೊತ್ತೇ?, ಆ ಪಾತ್ರಕ್ಕೆ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರ ಮೊದಲ ಚಾಯ್ಸ್ ಯಾರಾಗಿದ್ದರು? ಈ ಬಗ್ಗೆ ಹಿರಾನಿ ಅವರೇ ಹೇಳಿಕೊಡಿದ್ದಾರೆ.
"ಆಮೀರ್ ನನ್ನ ಆಪ್ತ ಮಿತ್ರರಲ್ಲಿ ಒಬ್ಬರು. ನಾನು ಯಾವುದೇ ಚಿತ್ರಕಥೆಯನ್ನು ಕೈಗೆತ್ತಿಕೊಂಡರೂ ಆ ಬಗ್ಗೆ ಮೊದಲು ಆಮೀರ್ ಅವರಿಗೆ ಹೇಳಿ, ಅವರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತೇನೆ.
ಇದನ್ನೂಓದಿ: RRR update : ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್ನ್ಯೂಸ್
ಸಂಜು ಚಿತ್ರದ ಕಥೆಯನ್ನೂ ಅವರಿಗೆ ಹೇಳಿದ್ದೆ. ಕಥೆ ಕೇಳಿ ಖುಷಿಯಾದ ಆಮೀರ್, ತಂದೆ ಪಾತ್ರವನ್ನು ಯಾರು ಮಾಡುತ್ತಾರೆ ಎಂದು ಕೇಳಿದರು. ನಾನು ಸುಮ್ಮನೆ, ನೀವೇ ಮಾಡಿದರೆ ಚೆನ್ನಾಗಿರುತ್ತದೆ ಎಂದೆ. ಅವರು ತಕ್ಷಣ ನಿರಾಕರಿಸಲಿಲ್ಲ. ಸ್ವಲ್ಪ ಟೈಮ್ ಕೊಡಿ, ಯೋಚಿಸಿ ಹೇಳುತ್ತೇನೆ ಎಂದರು. ಅದರಂತೆ ಸ್ವಲ್ಪ ದಿನಗಳ ನಂತರ ಅವರನ್ನು ಕೇಳಿದಾಗ, ಅವರು ತಾವು ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಮಿರ್ಗೆ ಪ್ರಮುಖವಾಗಿ ಸಂಜಯ್ ದತ್ ಅವರ ಪಾತ್ರವನ್ನು ಮಾಡುವ ಆಸೆ ಇತ್ತು. ಆ ಪಾತ್ರ ಅದ್ಭುತವಾಗಿದೆ, ಅಂಥದ್ದೊಂದು ಪಾತ್ರ ಬೇಕು ಎನ್ನುತ್ತಿದ್ದರು. ಆದರೆ, ಅಷ್ಟರಲ್ಲಿ ಆ ಪಾತ್ರಕ್ಕೆ ರಣಬೀರ್ ಆಯ್ಕೆಯಾಗಿದ್ದರು. ಹಾಗಾಗಿ, ಆಮೀರ್ ಚಿತ್ರದಲ್ಲಿ ನಟಿಸುವುದಿಲ್ಲ ಎಂದರು.
ಇದರ ಜೊತೆಗೆ ಇನ್ನೂ ಒಂದು ಕಾರಣವಿದೆ. ಆಮೀರ್ ಅಷ್ಟರಲ್ಲಿ 'ದಂಗಲ್' ಚಿತ್ರದಲ್ಲಿ ಹಿರಿಯ ವ್ಯಕ್ತಿಯ ಪಾತ್ರ ಮಾಡಿದ್ದರು. ಮತ್ತೆ ಸಂಜು ಚಿತ್ರದಲ್ಲೂ ಮುದುಕನ ಪಾತ್ರ ಮಾಡಿದರೆ, ಮುಂದೆ ಅದೇ ಪಾತ್ರಕ್ಕೆ ಬ್ರ್ಯಾಂಡ್ ಆಗುವ ಭಯ ಅವರಿಗಿತ್ತು. ಸುನೀಲ್ ದತ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಆಮೀರ್ ಒಪ್ಪಲಿಲ್ಲ" ಎಂದು ಹಿರಾನಿ ಹೇಳಿದ್ದಾರೆ.