ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಅಲಿ ಫಜಲ್ ಅವರು ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಜನಪ್ರಿಯ ಸ್ಕಾಟಿಷ್ ನಟ ಗೆರಾರ್ಡ್ ಬಟ್ಲರ್ ಜೊತೆ 'ಕಂದಹಾರ್' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ 'ಏಂಜೆಲ್ ಹ್ಯಾಸ್ ಫಾಲನ್' ಮತ್ತು 'ಫೆಲೋನ್' ಸೇರಿದಂತೆ ಹಿಟ್ ಸಿನಿಮಾಗಳನ್ನು ನೀಡಿದ್ದ ರಿಕ್ ರೋಮನ್ ವಾ ಅವರು 'ಕಂದಹಾರ್' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯಲ್ಲಿ ಮಾಜಿ ಮಿಲಿಟರಿ ಗುಪ್ತಚರ ಅಧಿಕಾರಿ ಮಿಚೆಲ್ ಲಾಫೋರ್ಚುನ್ ಅವರ ಅನುಭವಗಳನ್ನು ಆಧರಿಸಿದ ಕಥೆ ಇದಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.