ಅಕ್ಷಯ್ ಕುಮಾರ್ ಅಭಿನಯದ ನಿರೀಕ್ಷಿತ ಚಿತ್ರಗಳ ಪೈಕಿ ಬೆಲ್ ಬಾಟಮ್ ಕೂಡಾ ಒಂದು. ಕಳೆದ ವರ್ಷ ಚಿತ್ರೀಕರಣಗೊಂಡ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇದೀಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಚಿತ್ರವು ಜುಲೈ 27ರಂದು ಬಿಡುಗಡೆಯಾಗುತ್ತಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಚಿತ್ರ ಬಿಡುಗಡೆ ಎಂದರೆ, ಯಾವ ಓಟಿಟಿಯಲ್ಲಿ ಎಂಬ ಪ್ರಶ್ನೆ ಬರುವುದು ಸಹಜ. ಆದ್ರೆ ಬೆಲ್ ಬಾಟಮ್ ಬಿಡುಗಡೆಯಾಗುತ್ತಿರುವುದು ಓಟಿಟಿಯಲ್ಲಲ್ಲ, ಚಿತ್ರಮಂದಿರಗಳಲ್ಲಿ ಎಂಬುದು ಗೊತ್ತಿರಲಿ. ಈಗಾಗಲೇ ಮುಂಬೈನಲ್ಲಿ ಚಲನಚಿತ್ರಗಳ ಪ್ರದರ್ಶನ ಪ್ರಾರಂಭವಾಗಿದೆ. ಮುಂದಿನ ತಿಂಗಳ ಹೊತ್ತಿಗೆ ದೇಶದ ಬೇರೆಬೇರೆ ರಾಜ್ಯಗಳಲ್ಲೂ ಚಿತ್ರಪ್ರದರ್ಶನ ಪ್ರಾರಂಭವಾಗುವ ನಿರೀಕ್ಷೆ ಇದೆ. ಹಾಗಾಗಿ, ಓಟಿಟಿ ಬದಲಿಗೆ ನೇರವಾಗಿ ಚಿತ್ರಮಂದಿರಗಳಲ್ಲೇ ಜುಲೈ 27ರಂದು ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.
ಲಾಕ್ ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ದೊಡ್ಡ ಚಿತ್ರ ಎಂಬ ಹೆಗ್ಗಳಿಕೆಗೆ ಬೆಲ್ಬಾಟಮ್ ಪಾತ್ರವಾಗುತ್ತಿದೆ. 80ರ ದಶಕದ ರೆಟ್ರೋ ಥ್ರಿಲ್ಲರ್ ಕಥೆ ಹೊಂದಿರುವ ಬೆಲ್ ಬಾಟಮ್ ಚಿತ್ರೀಕರಣ ಕಳೆದ ವರ್ಷ ಲಾಕ್ಡೌನ್ ನಂತರ ಸ್ಕಾಟ್ಲ್ಯಾಂಡ್ನಲ್ಲಿ ನಡೆದಿತ್ತು. ಇಡೀ ಚಿತ್ರತಂಡ ಅಲ್ಲಿಗೆ ಹೋಗಿ 50ಕ್ಕೂ ಹೆಚ್ಚು ದಿನಗಳಲ್ಲಿ ಚಿತ್ರೀಕರಣ ಮುಗಿಸಿ, ಸ್ವದೇಶಕ್ಕೆ ವಾಪಸ್ಸಾಗಿದ್ದರು.
ಆ ನಂತರ ಈ ವರ್ಷದ ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಕೊರೊನಾ ಎರಡನೇ ಅಲೆ ಮತ್ತು ಲಾಕ್ಡೌನ್ನಿಂದ ಅದು ಸಾಧ್ಯವಾಗಿಲ್ಲ. ಈಗ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಬೆಲ್ ಬಾಟಮ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಹುಮಾ ಖುರೇಷಿ, ಲಾರಾ ದತ್ತ ಮುಂತಾದವರು ನಟಿಸಿದ್ದು, ರಂಜಿತ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಪೂಜಾ ಎಂಟರ್ಟೈನ್ಮೆಂಟ್ ಅಡಿ ಈ ಚಿತ್ರವನ್ನು ಜಾಕಿ ಭಗ್ನಾನಿ ನಿರ್ಮಿಸಿದ್ದಾರೆ.