ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಚಿತ್ರವು ಜುಲೈ 27ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ ಚಿತ್ರದ ಕುರಿತಾಗಿ ಒಂದು ದೊಡ್ಡ ಸುದ್ದಿ ಬಂದಿದೆ.
ಬಜೆಟ್ ಜಾಸ್ತಿಯಾಗಿರುವುದರಿಂದ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಅಷ್ಟೊಂದು ಹಣ ವಾಪಸ್ ಪಡೆಯುವುದು ಕಷ್ಟವಾಗಿದ್ದು ಅಕ್ಷಯ್ ತಮ್ಮ ಸಂಭಾವನೆಯಲ್ಲಿ 30 ಕೋಟಿ ರೂ.ಗಳನ್ನು ಕಡಿತಗೊಳಿಸಿದ್ದಾರೆ ಅನ್ನೋದು ಸಂಚಲನ ಮೂಡಿಸಿದೆ.
ಅಕ್ಷಯ್ ಕುಮಾರ್ ಹೇಳಿಕೇಳಿ ಬಾಲಿವುಡ್ ಅಷ್ಟೇ ಅಲ್ಲ, ಇಡೀ ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲೊಬ್ಬರು. ಅವರು ಒಂದು ಚಿತ್ರಕ್ಕೆ 115 ಕೋಟಿ ರೂ.ಗಳ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಇದೆ. ಇನ್ನು, ಅವರ ಚಿತ್ರಕ್ಕೆ ಕನಿಷ್ಠ 200 ಕೋಟಿ ರೂ ಬಜೆಟ್ ಎತ್ತಿಟ್ಟಿರಬೇಕಾಗುತ್ತದೆ. ಬೆಲ್ ಬಾಟಮ್ ಚಿತ್ರದ ಬಜೆಟ್ ಸಹ 200 ಕೋಟಿ ರೂ. ದಾಟಿದ್ದು, ಸದ್ಯದ ಸಂದರ್ಭದಲ್ಲಿ ಅಷ್ಟೊಂದು ಹಣವನ್ನು ವಾಪಸ್ ಪಡೆಯುವುದು ಕಷ್ಟವಾಗಿರುವುದರಿಂದ, ನಿರ್ಮಾಪಕರ ಮನವಿಯ ಮೇರೆಗೆ 30 ಕೋಟಿ ರೂ.ಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಸುದ್ದಿಯನ್ನು ಅಕ್ಷಯ್ ಕುಮಾರ್ ಮತ್ತು ಚಿತ್ರದ ನಿರ್ಮಾಪಕ ವಾಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ನಿರಾಕರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಫೇಕ್ ನ್ಯೂಸ್ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲವೆಂದು ಹೇಳಿರುವ ಅವರು, ಬ್ಯುಸಿನೆಸ್ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಮತ್ತು ಎಲ್ಲವೂ ಅಂದುಕೊಂಡಂತೆಯೇ ಆಗುತ್ತಿದೆ ಎಂದಿದ್ದಾರೆ.
ಬೆಲ್ ಬಾಟಮ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಹುಮಾ ಖುರೇಷಿ, ಲಾರಾ ದತ್ತ ಮುಂತಾದವರು ನಟಿಸಿದ್ದು, ರಂಜಿತ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಪೂಜಾ ಎಂಟರ್ಟೈನ್ಮೆಂಟ್ ಅಡಿ ಈ ಚಿತ್ರವನ್ನು ಹಿರಿಯ ನಿರ್ಮಾಪಕ ವಾಶು ಭಗ್ನಾನಿ ಅವರ ಮಗ ಜಾಕಿ ಭಗ್ನಾನಿ ನಿರ್ಮಿಸಿದ್ದಾರೆ.