ಪ್ರಪಂಚದಲ್ಲಿ ಒಬ್ಬರಂತೆ 7 ಮಂದಿ ಇರುತ್ತಾರೆ ಎಂಬ ಮಾತಿದೆ. ಇದು ನಮ್ಮೆಲ್ಲರಿಗೂ ಅನುಭವವಾಗಿದೆ. ಸಿನಿಮಾ ನಟ-ನಟಿಯರನ್ನು ಹೋಲುವ ಎಷ್ಟೋ ಮಂದಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದನ್ನು ನಾವು ನೋಡುತ್ತಿರುತ್ತೇವೆ. ಸ್ನೇಹ ಉಲ್ಲಾಳ್ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಅವರನ್ನು ಹೋಲುತ್ತಾರೆ ಎಂಬುದು ತಿಳಿದ ವಿಚಾರ. ಇದೀಗ ಐಶ್ವರ್ಯ ಅವರನ್ನೇ ಹೋಲುವ ಪಾಕಿಸ್ತಾನಿ ನಟಿಯೊಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಹೋಲುವ ಡೂಪ್ಲಿಕೆಟ್ಗಳನ್ನು ನಾವು ನೋಡಿದ್ದೇವೆ. ಇದೀಗ ಮತ್ತೆ ಐಶ್ವರ್ಯ ರೈ ಸರದಿ. ಪಾಕಿಸ್ತಾನದ ಆಮ್ನಾ ಇಮ್ರಾನ್ ಎಂಬ ಯುವತಿ ಕೂಡಾ ನೋಡಲು ಥೇಟ್ ಐಶ್ವರ್ಯ ಅವರಂತೆ ಇದ್ದು ಇವರಿಬ್ಬರನ್ನು ಜೊತೆ ಸೇರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿವೆ. ಮೊದಲ ಬಾರಿಗೆ ಅಮ್ನಾ ಫೋಟೋ ನೋಡಿದವರು ನಂತರ ಈಕೆ ಐಶ್ವರ್ಯ ರೈ ಅಲ್ಲ ಎಂದು ತಿಳಿದ ನಂತರ ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸಿನಿಮಾ ನಟ-ನಟಿಯರಂತೆ ಕಾಣಬೇಕು ಎಂದು ಎಷ್ಟೋ ಮಂದಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವುದುಂಟು. ಈ ರೂಮರ್ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ನಾ " ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು, ನನ್ನ ಫೋಟೋಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಐಶ್ವರ್ಯ ಅವರಂತೆ ಕಾಣಲು ಸರ್ಜರಿ ಮಾಡಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಆದರೆ ನಾನು ಯಾವ ರೀತಿಯ ಸರ್ಜರಿ ಮಾಡಿಸಿಕೊಂಡಿಲ್ಲ" ಎಂದು ಆಮ್ನಾ ಸ್ಪಷ್ಟಪಡಿಸಿದ್ದಾರೆ.