ಮುಂಬೈ :ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ ಮಗ ನಟ ಅಭಿಷೇಕ್ ಬಚ್ಚನ್ ಕೋವಿಡ್ ವರದಿ ಪಾಸಿಟಿವ್ ಬಂದಿದ್ದು, ಕುಟುಂಬಸ್ಥರಾದ ಜಯ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಅವರಿಗೆ ನೆಗೆಟಿವ್ ಬಂದಿದೆ ಎಂದು ಹೇಳಲಾಗುತ್ತಿದ್ದು, ವರದಿ ಬರಲು ಬಾಕಿಯಿದೆ.
ಶನಿವಾರ ಪ್ರತ್ಯೇಕ ಟ್ವೀಟ್ ಮಾಡಿದ್ದ ಅಮಿತಾಬ್ ಬಚ್ಚನ್ ಮತ್ತು ಪುತ್ರ ನಟ ಅಭಿಷೇಕ್ ಬಚ್ಚನ್ ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಖಚಿತ ಪಡಿಸಿದ್ದರು. ಆ ಬಳಿಕ ಕಟುಂಬಸ್ಥರಿಗೆ ನೆಗೆಟಿವ್ ಬಂದಿರುವುದಾಗಿ ವರದಿಯಾಗಿದೆ.
ಸದ್ಯ ಸೋಂಕಿತರಾಗಿರುವ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಬಚ್ಚನ್ ಕುಟುಂಬಸ್ಥರ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ, ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಕೊರೊನಾ ವರದಿ ಮಾತ್ರ ಈಗ ಬಂದಿದೆ. ಅವರ ಕುಟುಂಬ ಸದಸ್ಯರು, ಸಿಬ್ಬಂದಿ, ಚಾಲಕರನ್ನು ನಾನಾವತಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಗಳು ಇಂದು (ಜುಲೈ 12) ಬರುವ ನಿರೀಕ್ಷೆಯಿದೆ ಎಂದಿದ್ದಾರೆ.
ಶನಿವಾರ ಸಂಜೆ ಕೋವಿಡ್ ಸೋಂಕು ತಗುಲಿರುವ ಕುರಿತು ಟ್ವೀಟ್ ಮಾಡಿದ್ದ ಬಿಗ್ ಬಿ, ಟಿ 3590 - ನನಗೆ ಕೋವಿಡ್ ಪಾಸಿಟಿವ್ ಬಂದಿದೆ, ಆಸ್ಪತ್ರೆಗೆ ದಾಖಲಾಗಿದ್ದೇನೆ. ಕುಟುಂಬ ಸದಸ್ಯರು ಮತ್ತು ಸಿಬ್ಬಂದಿ ಪರೀಕ್ಷೆಗೆ ಒಳಗಾಗಿದ್ದಾರೆ. ಅವರ ವರದಿಗಾಗಿ ಕಾಯಲಾಗುತ್ತಿದೆ. ಕಳೆದ 10 ದಿನಗಳಲ್ಲಿ ನಮ್ಮ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದರು. ಅಲ್ಲದೆ ತಾನು ವೆಂಟಿಲೇಟರ್ನಲ್ಲಿ ಇಲ್ಲ ಎಂಬುವುದನ್ನು ತಿಳಿಸಿದ್ದರು.
ಅಮಿತಾಬ್ ಬಚ್ಚನ್ ಟ್ವೀಟ್ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್, ನನ್ನ ತಂದೆ ಮತ್ತು ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ನಾವಿಬ್ಬರು ಸಣ್ಣ ಪುಟ್ಟ ರೋಗದ ಲಕ್ಷಣ ಹೊಂದಿದ್ದೇವೆ. ಸದ್ಯ ಆಸ್ಪತ್ರೆಗೆ ದಾಖಲಾಗಿದ್ದೇವೆ, ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಮ್ಮ ಕುಟುಂಬಸ್ಥರು ಪರೀಕ್ಷೆಗೆ ಒಳಗಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಭಯಪಡಬೇಡಿ ಎಲ್ಲರೂ ಧೈರ್ಯದಿಂದ ಇರುವಂತೆ ವಿನಂತಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು.