ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಮರಣಾ ನಂತರ ಎನ್‌ಸಿಬಿ, ಇಡಿ ಮತ್ತು ಸಿಬಿಐ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಲಾಂಗ್ ಗ್ಯಾಪ್ನ ಬಳಿಕ ಹೊಸ ವರ್ಷದಲ್ಲಿ ಇದೀಗ ಮತ್ತೆ ಸಿನಿಮಾಗಳಿಗೆ ಮರಳಲಿದ್ದಾರೆ.
ಈ ವರ್ಷದ ಆರಂಭದಲ್ಲಿ ರಿಯಾ ಕಮ್ ಬ್ಯಾಕ್ ಮಾಡಲಿದ್ದಾರೆ ಅಂತಾ ದಿ. ಸುಶಾಂತ್ ಮತ್ತು ರಿಯಾ ಅವರ ಆಪ್ತರಾದ ಚಲನಚಿತ್ರ ನಿರ್ಮಾಪಕ ರೂಮಿ ಜಾಫ್ರಿ ತಿಳಿಸಿದ್ದಾರೆ. 2020 ರಿಯಾ ಪಾಲಿಗೆ ಆಘಾತಕಾರಿ ವರ್ಷವಾಗಿದೆ. ಖಂಡಿತವಾಗಿಯೂ ಆ ವರ್ಷ ಎಲ್ಲರಿಗೂ ಕೆಟ್ಟದಾಗಿತ್ತು.
ಆದರೆ, ರಿಯಾಗೆ ಎಲ್ಲರಿಗಿಂತ ತುಸು ಹೆಚ್ಚೇ ಕಷ್ಟ ನೀಡಿತು ಎಂದು ರೂಮಿ ಹೇಳಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಹುಡುಗಿಯೊಬ್ಬಳು ಒಂದು ತಿಂಗಳು ಜೈಲಿನಲ್ಲಿ ಕಳೆಯಲು ಸಾಧ್ಯವೇ? ಇದು ಅವಳ ಆತ್ಮಸ್ಥೈರ್ಯವನ್ನು ಸಂಪೂರ್ಣವಾಗಿ ಕುಗ್ಗಿಸಿದೆ. "ರಿಯಾ ಮುಂದಿನ ವರ್ಷದ ಆರಂಭದಲ್ಲಿ ತನ್ನ ಕೆಲಸಕ್ಕೆ ಮರಳಲಿದ್ದಾರೆ" ಎಂದು ಜಾಫ್ರಿ ಹೇಳಿದ್ದಾರೆ.
ಇತ್ತೀಚೆಗೆ ನಾನು ರಿಯಾಳನ್ನು ಭೇಟಿಯಾದಾಗ, ಆಕೆ ಸೈಲೆಂಟ್ ಆಗಿರುವುದನ್ನು ನಾನು ಗಮನಿಸಿದ್ದೇನೆ. ರಿಯಾ ಬದುಕಿನಲ್ಲಿ ಅದೇನೆ ನಡೆದಿರಲಿ ಚಿತ್ರರಂಗ ಆಕೆಗೆ ಮತ್ತೆ ಅವಕಾಶ ನೀಡಲಿದೆ ಎಂದು ರೂಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಿಯಾ ರೂಮಿಯವರ ಮುಂಬರುವ ಥ್ರಿಲ್ಲರ್ ಸಿನಿಮಾ 'ಚೆಹ್ರೆ'ಯಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಇಮ್ರಾನ್ ಹಶ್ಮಿ ಮತ್ತು ಅಮಿತಾಬ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿರಲಿದ್ದಾರೆ.
ಇನ್ನು, ರೂಮಿಯ ಹೆಸರಿಡದ ಚಿತ್ರವೊಂದರಲ್ಲಿ ಸುಶಾಂತ್ ಮತ್ತು ರಿಯಾ ಒಟ್ಟಿಗೆ ಕಾಣಿಸಿಕೊಳ್ಳಬೇಕಿತ್ತು. ಆದರೆ, ಸುಶಾಂತ್ ರಜಪೂತ್ ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ರೂಮಿಯವರ ಆ ಸಿಸಿಮಾ ನಿರ್ಮಾಣದ ಕನಸು ಕನಸಾಗೇ ಉಳಿಯಿತು.
ಆ ಸಿನಿಮಾವನ್ನು ಎಸ್‌ಎಸ್‌ಆರ್ ಅವರನ್ನು ಗಮನದಲ್ಲಿಟ್ಟುಕೊಂಡು ಅವರಿಗೆಂದೇ ಕಥೆ ಹೆಣೆಯಲಾಗಿತ್ತು. ಆದರೆ, ಎಸ್‌ಎಸ್‌ಆರ್ ಸಾವನ್ನಪ್ಪಿದ್ದರಿಂದ ತಾನು ಎಂದಿಗೂ ಈ ಚಿತ್ರವನ್ನು ನಿರ್ಮಿಸುವುದಿಲ್ಲ ಎಂದು ರೂಮಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ನೀವಿಲ್ಲದೆ ಮುಂದಿನದಕ್ಕೆ ಪ್ರಯಾಣ.. ಹೊಸ ವರ್ಷಕ್ಕೆ ತಂದೆಯೊಂದಿಗಿನ ಫೋಟೋ ಹಂಚಿಕೊಂಡ ನಟ ಇರ್ಫಾನ್ ಪುತ್ರ