ಹೈದರಾಬಾದ್ :ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಿರುವ ಬಾಲಿವುಡ್ ನಟಿ ವಾರಿನಾ ಹುಸೇನ್, ತಮ್ಮ ಹಿಂದಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಎರಡು ದಶಕಗಳ ಹಿಂದೆಯೇ ತಮ್ಮ ಕುಟುಂಬ ಅಫ್ಘಾನಿಸ್ತಾನ ತೊರೆದು ಭಾರತಕ್ಕೆ ಬಂದ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದೀಗ ಅಫ್ಘಾನಿಸ್ತಾನದಿಂದ ಅನೇಕ ಕುಟುಂಬಗಳು ಸ್ಥಳಾಂತರವಾಗುತ್ತಿರುವುದನ್ನು ಕಂಡರೆ ನನ್ನ ಹೃದಯ ಕಂಪಿಸುತ್ತಿದೆ. ಯಾಕೆಂದರೆ, 2001ರಲ್ಲಿ ತಾಲಿಬಾನ್ ಹಾಗೂ ಸೇನಾ ಪಡೆಗಳ ಯುದ್ಧದ ವೇಳೆ ನಮ್ಮ ಕುಟುಂಬ ದೇಶವನ್ನು ತೊರೆದ ಚಿತ್ರಗಳು ನನ್ನ ಕಣ್ಮುಂದೆ ಬರುತ್ತಿವೆ. 20 ವರ್ಷಗಳ ಬಳಿಕ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾರಿನಾ ಹುಸೇನ್ ಹೇಳಿದ್ದಾರೆ.
ನಿರಾಶ್ರಿತರ ಸಂಕಷ್ಟದ ಬಗ್ಗೆ ಮಾತನಾಡಿದ ಅವರು, ನಾನು ಅದೃಷ್ಟಶಾಲಿಯಾಗಿದ್ದೆ. ಅಂದು ನನ್ನನ್ನು ಭಾರತ ಸ್ವೀಕರಿಸಿತ್ತು. ಇದೀಗ ಭಾರತ ನನ್ನ ಮನೆಯಾಗಿದೆ. ಆದರೆ, ಈಗ ಎಲ್ಲರಿಗೂ ಇಲ್ಲಿ ನೆಲೆಸುವ ಅವಕಾಶ ಸಿಗುತ್ತಿಲ್ಲ. ಅಫ್ಘಾನಿಸ್ತಾನದಂತಹ ದೇಶದ ಪರಿಸ್ಥಿತಿಗಳು ತುರ್ತು ವಲಸೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಸಾವಿರಾರು ಜನರು ನಿರಾಶ್ರಿತರಾಗಿ ಆಶ್ರಯಕ್ಕಾಗಿ ನೆರೆಯ ದೇಶಗಳಿಗೆ ಆಗಮಿಸುತ್ತಾರೆ. ಆದರೆ, ಅಲ್ಲಿ ತಕ್ಷಣದ ವಸತಿ ಕಷ್ಟವಾಗುತ್ತದೆ ಎಂದರು.