ಮುಂಬೈ(ಮಹಾರಾಷ್ಟ್ರ) ಕೊರೊನಾ ಭೀತಿಯಿಂದ ಮುಂದೂಡಲಾಗಿದ್ದ 'ತಲೈವಿ' ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹೀಗಾಗಿ, ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, 'ಸಾಯುತ್ತಿರುವ ಚಲನಚಿತ್ರೋದ್ಯಮವನ್ನು ದಯವಿಟ್ಟು ರಕ್ಷಿಸಿ' ಎಂದು ಮನವಿ ಮಾಡಿದ್ದಾರೆ.
ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಹಾರಾಷ್ಟ್ರ ಸರ್ಕಾರ ಅವಕಾಶ ನೀಡಿದೆ. ಈ ಮಧ್ಯೆ 'ತಲೈವಿ' ಚಿತ್ರತಂಡ ಚಿತ್ರ ಬಿಡುಗಡೆಗೆ ಮುಂದಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳನ್ನು ತೆರೆಯುವ ಮೂಲಕ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಚಲನಚಿತ್ರೋದ್ಯಮ ಹಾಗೂ ಕಲಾವಿದರನ್ನು ರಕ್ಷಿಸಬೇಕು ಅನ್ನೋದು ಕಂಗನಾ ಆಗ್ರಹ.
ಮಹಾರಾಷ್ಟ್ರದಲ್ಲಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಸರ್ಕಾರಿ ಕಚೇರಿಗಳು, ಸ್ಥಳೀಯ ರೈಲುಗಳು ಸೇರಿ ಎಲ್ಲವೂ ನಡೆಯುತ್ತಿವೆ. ಆದರೆ, ಕೊರೊನಾ ಕಾರಣದಿಂದ ಚಿತ್ರಮಂದಿರಗಳನ್ನು ಮಾತ್ರ ಮುಚ್ಚಲಾಗಿದೆ. ಮಹಾರಾಷ್ಟ್ರ ಸರ್ಕಾರದ ಪ್ರಕಾರ ಕೇವಲ ಚಿತ್ರಮಂದಿರಗಳಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ಹರಡುತ್ತವೆಯೇ? ಎಂದು ಕಂಗನಾ ಪ್ರಶ್ನಿಸಿದ್ದಾರೆ.
ಬಹುನಿರೀಕ್ಷಿತ ಸಿನಿಮಾ 'ತಲೈವಿ' ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗು ಒಂದು ಕಾಲದ ಸ್ಟಾರ್ ನಟಿಯೆಂದೇ ಗುರುತಿಸಲಾದ ದಿ.ಜಯಲಲಿತಾ ಅವರ ಜೀವನ ಆಧರಿಸಿದೆ. ಈ ಸಿನಿಮಾ ಇದೇ ಸೆಪ್ಟೆಂಬರ್ 10 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
ತಮಿಳುನಾಡಿನ ಮಾಜಿ ಸಿಎಂಗಳಾದ ಎಂ.ಜಿ.ರಾಮಚಂದ್ರನ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ನಟಿಸಿದರೆ, ಎಂ.ಕರುಣಾನಿಧಿಯಾಗಿ ನಾಸರ್ ಬಣ್ಣ ಹಚ್ಚಿದ್ದಾರೆ. ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
ದಿ.ಜಯಲಲಿತಾ ಸಮಾಧಿಗೆ ನಟಿ ಕಂಗನಾ ರಣಾವತ್ ಗೌರವ
ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಅವತರಣಿಕೆಯಲ್ಲಿ ‘ತಲೈವಿ’ ಬಿಡುಗಡೆಯಾಗಲಿದೆ.