ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವು, ಮತ್ತು ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರಿಯಾ ಚಕ್ರವರ್ತಿ ಬರೋಬ್ಬರಿ 28 ದಿನಗಳ ಬಳಿಕ ಬೈಕುಲಾ ಜೈಲಿನಿಂದ ರಿಲೀಸ್ ಆಗಿದ್ದಾರೆ.
ನಟಿ ರಿಯಾ ಚಕ್ರವರ್ತಿಯನ್ನ ಸೆಪ್ಟೆಂಬರ್ 8ರಂದು ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್ಸಿಬಿ) ಬಂಧನ ಮಾಡಿತ್ತು. ಇದಾದ ಬಳಿಕ ಅವರು ಅನೇಕ ಸಲ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಅದು ವಜಾಗೊಂಡಿತ್ತು.
ಮಂಗಳವಾರ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಪ್ರಕರಣದ ಅರ್ಜಿ ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯದ ಮುಂದೆ ಬಂದಿತ್ತು. ವಿಚಾರಣೆ ನಡೆಸಿದ್ದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ರಿಯಾ ಸೇರಿದಂತೆ ಪ್ರಕರಣದಲ್ಲಿ ಬಂಧಿತ 20 ಆರೋಪಿಗಳ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು. ಇತ್ತ ರಿಯಾ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ರಿಯಾಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ರಿಯಾ ಚಕ್ರವರ್ತಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ರಿಯಾ ಬಿಡುಗಡೆಯಾದ ನಂತರ 10 ದಿನಗಳ ಕಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ತನ್ನ ಉಪಸ್ಥಿತಿಯನ್ನು ಗುರುತಿಸಬೇಕು. ಪಾಸ್ಪೋರ್ಟ್ ಠೇವಣಿ ಇಡಬೇಕು, ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶಕ್ಕೆ ಪ್ರಯಾಣಿಸಬಾರದು ಮತ್ತು ಮುಂಬೈ ತೊರೆಯಬೇಕಾದರೆ ತನಿಖಾಧಿಕಾರಿಗೆ ತಿಳಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಇನ್ನು ಇವರ ಸಹೋದರ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.