ಮುಂಬೈ:ವಂಚಕ ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಕಾರಣಕ್ಕೆ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ ಎದುರಾಗಿದೆ.
ಜಾರಿ ನಿರ್ದೇಶನಾಲಯ ಲುಕ್ ಔಟ್ ನೋಟಿಸ್ ಹೊರಡಿಸಿದ್ದು ವಲಸೆ ವಿಭಾಗದ ಅಧಿಕಾರಿಗಳು ನಟಿಯನ್ನು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗಿಳಿಸಿದರು.
ಮೂಲಗಳ ಪ್ರಕಾರ, ನಟಿ ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ನಿರ್ಗಮನ ಗೇಟ್ ಸಂಖ್ಯೆ 3ರ ಮೂಲಕ ಸಂಜೆ 5:30ಕ್ಕೆ ಮಸ್ಕತ್ಗೆ ತೆರಳುತ್ತಿದ್ದರು. ಆದ್ರೆ ವಂಚನೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಭಾರತ ಬಿಟ್ಟು ತೊರೆಯಲು ಅನುಮತಿ ನೀಡಬಾರದು ಎಂಬ ನಿರ್ದೇಶನದೊಂದಿಗೆ ಲುಕ್‌ಔಟ್ ನೋಟಿಸ್ ನೀಡಲಾಗಿತ್ತು.
ಇದನ್ನೂ ಓದಿ:ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ ಸಮಾರಂಭ
ವಂಚನೆ ಪ್ರಕರಣದ ವಿವರ:
ಫೋರ್ಟಿಸ್ ಹೆಲ್ತ್‌ಕೇರ್ ಪ್ರಮೋಟರ್ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ ವಂಚಿಸಿ, ಬಹುಕೋಟಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ದೆಹಲಿ ಪೊಲೀಸರಿಂದ ಬಂಧಿಲ್ಪಟ್ಟಿದ್ದ ಸುಕೇಶ್ ಚಂದ್ರಶೇಖರ್ ಮತ್ತು ಲೀನಾ ಪೌಲ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈಗಾಗಲೇ ಅವರು ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.
ಸುಕೇಶ್ ಚಂದ್ರಶೇಖರ್ ಈ ವಂಚನೆಯ ಸೂತ್ರಧಾರ. ಸುಮಾರು 17ನೇ ವಯಸ್ಸಿನಿಂದಲೂ ಆತ ಅಪರಾಧಗಳನ್ನು ಮಾಡುತ್ತಿದ್ದಾನೆ. ಆತನ ವಿರುದ್ಧ ಅನೇಕ ಎಫ್ಐಆರ್ಗಳು ದಾಖಲಾಗಿವೆ. ಪ್ರಸ್ತುತ ಆತನನ್ನು ರೋಹಿಣಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಇಡಿ ಹೇಳಿದೆ.
ಆಗಸ್ಟ್ನಲ್ಲಿ ಚಂದ್ರಶೇಖರ್ ಒಡೆತನದ ಕೆಲವು ನಿವೇಶನಗಳ ಮೇಲೆ ಇಡಿ ದಾಳಿ ಮಾಡಿ ಚೆನ್ನೈನ ಬಂಗಲೆ ಹಾಗೂ 82.5 ಲಕ್ಷ ರೂ. ನಗದು ಮತ್ತು 12ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿತ್ತು.