ಚಿತ್ರತಂಡ ತೊರೆದಿದ್ದ ರಾಘವ್ ಅವರನ್ನು ವಾಪಸ್ ಕರೆತರುವಲ್ಲಿ 'ಲಕ್ಷ್ಮೀ ಬಾಂಬ್' ನಿರ್ಮಾಪಕಿ ಶಬೀನಾ ಖಾನ್ ಯಶಸ್ವಿಯಾಗಿದ್ದಾರೆ. ಇನ್ಮುಂದೆ ಈ ನಿರ್ದೇಶಕರೇ ಅಕ್ಷಯ್ ಕುಮಾರ್ ನಟಿಸುತ್ತಿರುವ 'ಲಕ್ಷ್ಮೀ ಬಾಂಬ್'ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಮುನಿಸು ಮರೆತ ಲಾರೆನ್ಸ್... ಬಾಲಿವುಡ್ಗೆ ರಾಘವ್ ಕಮ್ಬ್ಯಾಕ್ - ರಾಘವ್ ಲಾರೆನ್ಸ್
ತಮಿಳು ನಟ ಹಾಗೂ ನಿರ್ದೇಶಕ ರಾಘವ್ ಲಾರೆನ್ಸ್ ಬಿಟೌನ್ಗೆ ವಾಪಸ್ ಆಗಿದ್ದಾರೆ. ಅವರೇ ಬಾಲಿವುಡ್ನ 'ಲಕ್ಷ್ಮೀ ಬಾಂಬ್' ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.
ತಮ್ಮ ಮರು ಆಗಮನದ ಬಗ್ಗೆ ಅಭಿಮಾನಿಗಳಿಗೆ ಟ್ವಿಟರ್ನಲ್ಲಿ ತಿಳಿಸಿರುವ ರಾಘವ್, ನಿಮ್ಮೆಲ್ಲರ ಇಚ್ಛೆಯಂತೆ ಲಕ್ಷ್ಮೀ ಬಾಂಬ್ ತಂಡ ಸೇರಿಕೊಳ್ಳುತ್ತಿದ್ದೇನೆ. ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು, ಎಲ್ಲ ಗೊಂದಲಗಳನ್ನು ಬಗೆಹರಿಸಿರುವ ನಟ ಅಕ್ಷಯ್ ಕುಮಾರ್ ಹಾಗೂ ನಿರ್ಮಾಪಕರಾದ ಶಬೀನಾ ಖಾನ್ ಅವರಿಗೂ ಧನ್ಯವಾದಗಳು. ನನಗೆ ಗೌರವ ನೀಡಿದ್ದಕ್ಕೆ ನಿಮಗೆ ಮತ್ತೊಮ್ಮೆ ಥ್ಯಾಂಕ್ಸ್ ಎಂದಿದ್ದಾರೆ.
ಇನ್ನು ತಮಿಳಿನ 'ಕಾಂಚನಾ 3' ಚಿತ್ರವೇ ಲಕ್ಷ್ಮೀ ಬಾಂಬ್ ಆಗಿ ಬಾಲಿವುಡ್ಗೆ ರಿಮೇಕ್ ಆಗುತ್ತಿದೆ. ಮೂಲ ಚಿತ್ರದಲ್ಲಿ ರಾಘವ್ ನಟಿಸಿ ನಿರ್ದೇಶಿಸಿದ್ದರು. ಲಕ್ಷ್ಮೀ ಬಾಂಬ್ನಲ್ಲಿಯ ಇವರ ಪಾತ್ರವನ್ನು ನಟ ಅಕ್ಷಯ್ ಕುಮಾರ್ ನಿಭಾಯಿಸುತ್ತಿದ್ದಾರೆ. ಇವರು ಕೇವಲ ನಿರ್ದೇಶನ ಮಾತ್ರ ಮಾಡುತ್ತಿದ್ದಾರೆ. ಇವರ ಗಮನಕ್ಕೆ ತರದೇ ಚಿತ್ರತಂಡ ಲಕ್ಷ್ಮೀ ಬಾಂಬ್ ಫಸ್ಟ್ ಪೋಸ್ಟರ್ ರಿಲೀಸ್ ಮಾಡಿತ್ತು. ಇದು ರಾಘವ್ ಅವರ ಬೇಸರಕ್ಕೆ ಕಾರಣವಾಗಿತ್ತು. ಗೌರವ ಸಿಗದ ಜಾಗದಲ್ಲಿ ನಾನು ಇರಲಾರೆ ಎಂದು ನೇರವಾಗಿ ಹೇಳಿದ್ದ ಅವರು, ಚಿತ್ರತಂಡದಿಂದ ಹೊರ ನಡೆದಿದ್ದರು. ಇದೀಗ ಚಿತ್ರತಂಡದ ಮನವೊಲಿಕೆಯಿಂದಾಗಿ ಪುನಃ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದಾರೆ.