ಮುಂಬೈ:ತನ್ನ ಮುಂದಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣ ಪುನರಾರಂಭಿಸಲು ಟರ್ಕಿಗೆ ತೆರಳಿರುವ ಬಾಲಿವುಡ್ ನಟ ಆಮೀರ್ ಖಾನ್, ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೊಗನ್ ಅವರನ್ನು ಭೇಟಿಯಾದರು.
ಆಮೀರ್ ಖಾನ್ ಕೋರಿಕೆಯ ಮೇರೆಗೆ ಈ ಸಭೆ ಆಯೋಜಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ತಮ್ಮ ಪಾನಿ ಫೌಂಡೇಶನ್ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಆಮೀರ್ ಮತ್ತು ಅವರ ಪತ್ನಿ ಕಿರಣ್ ರಾವ್ ಎಮೈನ್ ಎರ್ಡೊಗನ್ ಅವರೊಂದಿಗೆ ಚರ್ಚಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಎಮೈನ್ ಸಭೆಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, "ಇಸ್ತಾಂಬುಲ್‌ನಲ್ಲಿ ವಿಶ್ವಪ್ರಸಿದ್ಧ ಭಾರತೀಯ ನಟ, ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರಾದ ಆಮೀರ್ ಖಾನ್ ಅವರನ್ನು ಭೇಟಿಯಾಗಿ ನನಗೆ ಬಹಳ ಸಂತೋಷವಾಯಿತು. ಟರ್ಕಿಯ ವಿವಿಧ ಭಾಗಗಳಲ್ಲಿ ಅವರ ಇತ್ತೀಚಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರವನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಬರೆದಿದ್ದಾರೆ.
ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ಲಾಲ್ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿತ್ತು. 2020ರ ಕೊನೆಯಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದ್ದ ಈ ಚಿತ್ರ ಇದೀಗ 2021ರ ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.