ರೂಪ್ ತೆರಾ ಮಸ್ತಾನ..ಪ್ಯಾರ್ ಮೆರಾ ದೀವಾನ, ಮೆರಿ ಸಪ್ನೋಂಕಿ ರಾಣಿ ಕಬ್ ಆಯೆಗಿ ತೂ..... ಹಾಡುಗಳನ್ನು ಕೇಳದವರಿಲ್ಲ. ಇಂದಿಗೂ ಎಲ್ಲರ ಮೋಸ್ಟ್ ಫೇವರೆಟ್ ಲಿಸ್ಟ್ನಲ್ಲಿರುವ ಇವು ರಾಜೇಶ್ ಖನ್ನಾ ಹಾಗೂ ಶರ್ಮಿಳಾ ಠಾಗೂರ್ ಅಭಿನಯದ 'ಆರಾಧನಾ' ಚಿತ್ರದ ಎವರ್ಗ್ರೀನ್ ಹಾಡುಗಳು.
'ಆರಾಧನಾ' ಸಿನಿಮಾ ಬಿಡುಗಡೆಯಾಗಿ ಇಂದಿಗೆ 50 ವರ್ಷಗಳು ಕಳೆದಿದ್ದು ಇಂದು ಈ ಸಿನಿಮಾ ಸುವರ್ಣ ಮಹೋತ್ಸವ ಆಚರಿಸುತ್ತಿದೆ. 1969 ಸೆಪ್ಟೆಂಬರ್ 27 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಶಕ್ತಿ ಸಮಂತಾ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಭಾರತೀಯ ವಾಯು ಸೇನೆಯಲ್ಲಿ ಕಾರ್ಯನಿರ್ವಹಿಸುವ ನಾಯಕ ವೈದ್ಯನೊಬ್ಬನ ಮಗಳನ್ನು ಪ್ರೀತಿಸಿ ಗುಟ್ಟಾಗಿ ವಿವಾಹವಾಗುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಆತ ವಿಮಾನ ಅಪಘಾತದಲ್ಲಿ ಮೃತನಾಗುತ್ತಾನೆ. ಆ ವೇಳೆ ಆತನ ಪತ್ನಿ ಗರ್ಭಿಣಿಯಾಗಿರುತ್ತಾಳೆ. ಮುಂದೆ ಆಕೆ ಮಗನನ್ನು ಸಾಕಲು ಏನೆಲ್ಲಾ ಕಷ್ಟಪಡುತ್ತಾಳೆ, ಏನೆಲ್ಲಾ ತ್ಯಾಗ ಮಾಡುತ್ತಾಳೆ ಎಂಬುದೇ ಚಿತ್ರದ ಕಥೆ. ಚಿತ್ರದಲ್ಲಿ ರಾಜೇಶ್ ಖನ್ನಾ ತಂದೆ-ಮಗನಾಗಿ ಎರಡು ಶೇಡ್‌ಗಳಲ್ಲಿ ನಟಿಸಿದ್ದಾರೆ.
ಈ ಸಿನಿಮಾ ರಾಜೇಶ್ ಖನ್ನಾಗೆ ಅವರು ಈ ಹಿಂದೆ ಅಭಿನಯಿಸಿದ್ದ ಸಿನಿಮಾಗಳಿಗಿಂತ ಹೆಚ್ಚು ಹೆಸರು ತಂದುಕೊಟ್ಟಿತು. ಭಾರತದಲ್ಲಿ ಮಾತ್ರವಲ್ಲ, ಸೋವಿಯತ್ ಯೂನಿಯನ್ನಲ್ಲೂ ಕೂಡಾ ಈ ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಇದು ಶರ್ಮಿಳಾ ಠಾಗೂರ್ ಅವರಿಗೂ ಬಹಳ ವಿಶೇಷ. ಏಕೆಂದರೆ ಇದು ಅವರ ಮೊದಲ ಸಿನಿಮಾ ಹಾಗೂ ಚೊಚ್ಚಲ ಸಿನಿಮಾದಲ್ಲೇ ಅವರಿಗೆ ಉತ್ತಮ ನಟಿ ಫಿಲಂಫೇರ್ ಪ್ರಶಸ್ತಿ ಕೂಡಾ ಲಭಿಸಿತ್ತು. ಸಿನಿಮಾಗೆ ಸಚಿನ್ ಭೂಮಿಕ್ ಕಥೆ ಬರೆದಿದ್ದರು. ಇದು ಹಾಲಿವುಡ್ನ 'ಟು ಈಚ್ ಹಿಸ್ ಓನ್' ನಿಂದ ಸ್ಫೂರ್ತಿ ಪಡೆದ ಸಿನಿಮಾ. ಅಲ್ಲದೆ ಈ ಸಿನಿಮಾ ಕ್ಲೈಮ್ಯಾಕ್ಸ್ 'ಏಕ್ ಶ್ರೀಮಾನ್ ಏಕ್ ಶ್ರೀಮತಿ' ಸಿನಿಮಾ ಕ್ಲೈಮ್ಯಾಕ್ಸ್ಗೆ ಹತ್ತಿರವಿದ್ದರೂ ಇತಿಹಾಸ ಬರೆದಿದ್ದಂತೂ ನಿಜ. ನಂತರ ಈ ಚಿತ್ರ ತೆಲುಗು, ತಮಿಳು ಭಾಷೆಗಳಿಗೂ ರಿಮೇಕ್ ಆಯ್ತು.
ಎಸ್.ಡಿ. ಬರ್ಮನ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಈ ಎವರ್ಗ್ರೀನ್ ರೊಮ್ಯಾಂಟಿಕ್ ಸಿನಿಮಾದಲ್ಲಿ ಶರ್ಮಿಳಾ ಠಾಗೂರ್, ರಾಜೇಶ್ ಖನ್ನಾ, ಸುಜಿತ್ ಕುಮಾರ್, ಅಶೋಕ್ ಕುಮಾರ್, ಮದನ್ ಪುರಿ, ಫರೀದಾ ಜಲಾಲ್ ಹಾಗೂ ಇನ್ನಿತರರು ನಟಿಸಿದ್ದಾರೆ. ಅಂದು ಈ ಸಿನಿಮಾಗೆ ಉತ್ತಮ ನಿರ್ದೇಶಕ, ಉತ್ತಮ ನಟಿ ಹಾಗೂ ಉತ್ತಮ ಹಿನ್ನೆಲೆ ಗಾಯಕ ಸೇರಿ ಮೂರು ವಿಭಾಗಗಳಲ್ಲಿ ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತ್ತು.