ಕ್ಯಾಲಿಫೋರ್ನಿಯಾ (ಅಮೆರಿಕ) : ಮಾರ್ಕ್ ಜುಕರ್ ಬರ್ಗ್ ಅವರೊಂದಿಗೆ ನಡೆಯಲಿರುವ ಕೇಜ್ ಫೈಟ್ ಕುಸ್ತಿ ಸೆಣಸಾಟವನ್ನು ತಮ್ಮ ಮೈಕ್ರೋ-ಬ್ಲಾಗಿಂಗ್ ಸೈಟ್ ಎಕ್ಸ್ (X) ನಲ್ಲಿ ನೇರಪ್ರಸಾರ ಮಾಡುವುದಾಗಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭಾನುವಾರ ಘೋಷಿಸಿದ್ದಾರೆ. ಈ ಫೈಟ್ನ ನೇರಪ್ರಸಾರದಿಂದ ಬರುವ ಎಲ್ಲ ಆದಾಯವನ್ನು ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರಿಗೆ ಕೊಡುಗೆಯಾಗಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಮಸ್ಕ್ ಮತ್ತು ಜುಕರ್ ಬರ್ಗ್ ಮಧ್ಯೆ ಲಾಸ್ ವೇಗಾಸ್ನಲ್ಲಿ ಕೇಜ್ ಫೈಟ್ ನಡೆಯಲಿದೆ ಎಂದು ಹೇಳಲಾಗಿದೆ.
"ಜುಕ್ ವರ್ಸಸ್ ಮಸ್ಕ್ ಫೈಟ್ ಅನ್ನು ಎಕ್ಸ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದರಿಂದ ಬರುವ ಎಲ್ಲಾ ಆದಾಯವನ್ನು ಹಿರಿಯರಿಗಾಗಿ ಚಾರಿಟಿಗೆ ನೀಡಲಾಗುವುದು" ಎಂದು ಮಸ್ಕ್ ಭಾನುವಾರ ಬೆಳಿಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಮಸ್ಕ್ ಈ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಜಗತ್ತಿನ ಎರಡು ದೈತ್ಯ ಕಂಪನಿಗಳ ಮುಖ್ಯಸ್ಥರಾಗಿರುವ ಜುಕರ್ ಬರ್ಗ್ ಮತ್ತು ಎಲೋನ್ ಮಸ್ಕ್ ತಾವಿಬ್ಬರೂ ಕೇಜ್ ಫೈಟ್ ಆಡಲಿದ್ದೇವೆ ಎಂದು ಕಳೆದ ಜೂನ್ನಿಂದ ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಜುಕರ್ಬರ್ಗ್ ಅವರೊಂದಿಗೆ ಕೇಜ್ ಫೈಟ್ ಆಡಲು ತಾವು ಸಿದ್ಧವಿರುವುದಾಗಿ ಮಸ್ಕ್ ಜೂನ್ನಲ್ಲಿ ಟ್ವಿಟರ್ನಲ್ಲಿ ಹೇಳಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಫೇಸ್ಬುಕ್ ಮುಖ್ಯಸ್ಥ ಜುಕರ್ ಬರ್ಗ್, ಮಸ್ಕ್ ಅವರ ಪೋಸ್ಟ್ನ ಸ್ಕ್ರೀನ್ ಶಾಟ್ ಶೇರ್ ಮಾಡಿ, ಫೈಟ್ ಎಲ್ಲಿ ಮಾಡೋಣ ಲೊಕೇಶನ್ ಕಳುಹಿಸು ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಉತ್ತರಿಸಿದ್ದ ಮಸ್ಕ್, "ವೇಗಾಸ್ ಆಕ್ಟಾಗಾನ್" ಎಂದು ಪೋಸ್ಟ್ ಮಾಡಿದ್ದರು. ಜುಲೈನಲ್ಲಿ ಜುಕರ್ ಬರ್ಗ್ ಯುಎಫ್ಸಿ ಚಾಂಪಿಯನ್ಗಳಾದ ಇಸ್ರೇಲ್ ಅಡೆಸಾನ್ಯಾ ಮತ್ತು ಅಲೆಕ್ಸಾಂಡರ್ ವೊಲ್ಕನೋವ್ಸ್ಕಿ ಅವರೊಂದಿಗೆ ಮಿಕ್ಸೆಡ್ ಮಾರ್ಶಲ್ ಆರ್ಟ್ಗಳ ಸಮರ ಕಲೆಗಳಲ್ಲಿ (ಎಂಎಂಎ) ತರಬೇತಿ ಪಡೆಯಲು ಪ್ರಾರಂಭಿಸಿದ್ದು ಕುತೂಹಲ ಮೂಡಿಸಿದೆ.
ಭಾನುವಾರ ಕೂಡ ಮಸ್ಕ್ ಕೇಜ್ ಫೈಟ್ ಬಗ್ಗೆ ತಮ್ಮ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿ, ನಾನಿವಾಗ ಪ್ರತಿದಿನ ಭಾರ ಎತ್ತುವ ಅಭ್ಯಾಸ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ. ಕೆಲಸದಲ್ಲಿ ವ್ಯಾಯಾಮ ಮಾಡಲು ಸಮಯ ಸಿಗುತ್ತಿಲ್ಲ, ಹೀಗಾಗಿ ವ್ಯಾಯಾಮ ಉಪಕರಣಗಳನ್ನು ಆಫೀಸಿಗೂ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದಿದ್ದರು.
ಇಬ್ಬರ ಫೈಟ್ನ ಉದ್ದೇಶವಾದರೂ ಏನು ಎಂದು ಎಕ್ಸ್ ಬಳಕೆದಾರರೊಬ್ಬರು ಮಸ್ಕ್ಗೆ ಕೇಳಿದ್ದರು. ಇದಕ್ಕೆ ರಿಪ್ಲೈ ಮಾಡಿದ್ದ ಮಸ್ಕ್, ಇದೊಂದು ಯುದ್ಧದ ಸುಸಂಸ್ಕೃತ ರೂಪವಾಗಿದೆ. ಪುರುಷರು ಯುದ್ಧವನ್ನು ಪ್ರೀತಿಸುತ್ತಾರೆ ಎಂದಿದ್ದರು. ನಾನು ನಿಮ್ಮೊಂದಿಗೆ ಕೇಜ್ ಫೈಟ್ ಆಡಲು ಸಿದ್ಧನಿದ್ದೇನೆ ಎಂದು ಕಳೆದ ಜೂನ್ 20 ರಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ ನಂತರ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆ. ನಿಜವಾಗಿಯೂ ಇಬ್ಬರ ಮಧ್ಯೆ ಅಂಥದೊಂದು ಫೈಟ್ ನಡೆಯುತ್ತದೆಯಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದನ್ನೂ ಓದಿ :China Taiwan conflict: ತೈವಾನ್ ಮೇಲೆ ಆತ್ಮಹತ್ಯಾ ದಾಳಿಗೆ ಸಿದ್ಧ; ಚೀನಾ ವಾರ್ನಿಂಗ್