ಬೆಂಗಳೂರು: "ನಾನು ನಿನಗೆ ವಾಟ್ಸಾಪ್ ನಲ್ಲಿ ನನ್ನ ಲೊಕೇಶನ್ ಕಳುಹಿಸಿದ್ದೇನೆ. ಇವತ್ತು ಸಂಜೆ ನನ್ನ ಮನೆಗೆ ಬಂದು ಬಿಡು" ಎಂದು ನೀವು ನಿಮ್ಮ ಸ್ನೇಹಿತರಿಗೆ ತಿಳಿಸುತ್ತೀರಿ. "ನಿಮ್ಮ ಗೂಗಲ್ ಲೊಕೇಶನ್ ಕಳುಹಿಸಿ ಕೊಡುತ್ತೀರಾ ಪ್ಲೀಸ್?" ಎನ್ನುತ್ತಾನೆ ಡೆಲಿವರಿ ಏಜೆಂಟ್. ಇವೆಲ್ಲ ನಮಗೆ ದೈನಂದಿನ ಜೀವನದಲ್ಲಿ ಅತ್ಯಂತ ಸಾಮಾನ್ಯವಾದ ಮಾತುಕತೆಗಳಲ್ಲವೇ? ಈ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಇಂದು ನಾವು ಯಾವುದೇ ತಿರುವಿನ ರಸ್ತೆಯಲ್ಲಾದರೂ, ಯಾವುದೇ ಮೂಲೆಯ ಜಾಗದಲ್ಲಾದರೂ, ನಾವು ಇದೇ ಮೊದಲು ತೆರಳಿರುವ ವಿದೇಶದ ರಸ್ತೆಯಲ್ಲಿ ಬೇಕಾದರೂ ಅತ್ಯಂತ ಸುಲಭವಾಗಿ ಚಲಿಸಬಹುದು! ಇದಕ್ಕೆಲ್ಲ ಕಾರಣ ಜಿಪಿಎಸ್ ತಂತ್ರಜ್ಞಾನ.
ಜಿಪಿಎಸ್ ತಂತ್ರಜ್ಞಾನವನ್ನು ಅರ್ಥೈಸಿಕೊಳ್ಳೋಣ: ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ (ಜಿಪಿಎಸ್) ಎನ್ನುವುದು ಒಂದು ವಿಶಿಷ್ಟವಾದ ತಂತ್ರಜ್ಞಾನ. ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಜಾಲ ಭೂಮಿಯಲ್ಲಿರುವ ಉಪಕರಣಗಳಿಗೆ ಅವುಗಳಿರುವ ನಿಖರವಾದ ಸ್ಥಾನವನ್ನು ಕುರಿತು ಮಾಹಿತಿ ಒದಗಿಸುತ್ತವೆ. ಸ್ಮಾರ್ಟ್ ಫೋನ್, ನ್ಯಾವಿಗೇಶನ್ ಉಪಕರಣಗಳು, ಮತ್ತು ಸ್ಪೋರ್ಟ್ಸ್ ವಾಚ್‌ನಂತಹ ಉಪಕರಣಗಳು ಈ ಉಪಗ್ರಹಗಳಿಂದ ಸಂಕೇತಗಳನ್ನು ಸ್ವೀಕರಿಸಿ, ತಾವು ಯಾವ ಪ್ರದೇಶದಲ್ಲಿದ್ದೇವೆ ಎಂಬ ನಿಖರವಾದ ಮಾಹಿತಿಯನ್ನು ನೀಡುತ್ತವೆ. ಈ ಸಂಕೇತಗಳು ಉಪಗ್ರಹಗಳಿಂದ ಭೂಮಿಯ ಮೇಲಿರುವ ಉಪಕರಣಗಳನ್ನು ತಲುಪಲು ಎಷ್ಟು ಸಮಯ ಹಿಡಿಯುತ್ತದೆ ಎಂಬ ಆಧಾರದಲ್ಲಿ, ಜಿಪಿಎಸ್ ತಂತ್ರಜ್ಞಾನ ಆ ಉಪಕರಣ ಇರುವ ನಿಖರವಾದ ಸ್ಥಳ, ಎತ್ತರ ಮತ್ತು ಅದರ ವೇಗದ ಕುರಿತು ಕರಾರುವಾಕ್ಕಾದ ಮಾಹಿತಿಯನ್ನು ಒದಗಿಸುತ್ತದೆ. ಜಿಪಿಎಸ್ ತಂತ್ರಜ್ಞಾನವನ್ನು ವಿವಿಧ ರೀತಿಯಲ್ಲಿ ಬಳಸಬಹುದಾಗಿದ್ದು, ಜನರಿಗೆ ಸರಿಯಾದ ಮಾರ್ಗವನ್ನು ಸೂಚಿಸಲು, ವಸ್ತುಗಳು ಅಥವಾ ವ್ಯಕ್ತಿಗಳು ಎಲ್ಲಿದ್ದಾರೆ ಎಂದು ತಿಳಿಯಲು, ತುರ್ತು ಸಂದರ್ಭಗಳಲ್ಲಿ ನಿರ್ವಹಣಾ ವ್ಯವಸ್ಥೆ ಕೈಗೊಳ್ಳಲು ಪ್ರಯೋಜನಕಾರಿಯಾಗಿದೆ.
ಆಧುನಿಕ ನ್ಯಾವಿಗೇಶನ್ (ಸಂಚರಣಾ) ವ್ಯವಸ್ಥೆ : ಆದರೆ, ಭೇದಿಸಲು ಸಾಧ್ಯವಾಗದಷ್ಟು ಕತ್ತಲಿನಿಂದ ತುಂಬಿರುವ ಬಾಹ್ಯಾಕಾಶದಲ್ಲಿ, ಬ್ರಹ್ಮಾಂಡದಲ್ಲಿ ಸರಿಯಾದ ಪಥವನ್ನು ಹುಡುಕುವುದು ಸಂಪೂರ್ಣ ಬೇರೆಯದೇ ಕತೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಚಂದ್ರಯಾನ-3 ಭೂಮಿಯ ಕಕ್ಷೆಯಿಂದ ಸುಗಮವಾಗಿ ಹೊರ ಚಲಿಸಿದೆ. ಇದು ನಿಜಕ್ಕೂ ಒಂದು ಮಹತ್ತರ ಸಾಧನೆಯೇ ಆದರೂ, ಈ ಯೋಜನೆಯ ಗುರಿ ಇನ್ನೂ ಸಾಕಷ್ಟು ದೂರವಿದೆ. ಆದರೂ ಇಂತಹ ವಿಶಾಲವಾದ ವಿಶ್ವದಲ್ಲಿ ಯಾವುದೇ ಸರಿಯಾದ ಮಾರ್ಗಸೂಚಿಗಳಿಲ್ಲದೆ ಚಂದ್ರಯಾನ-3 ಅದು ಹೇಗೆ ಚಂದ್ರನೆಡೆಗೆ ನಿಖರವಾಗಿ ಚಲಿಸುತ್ತದೆ? ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮತ್ತು ಜಗತ್ತಿನ ವಿವಿಧ ಸಂಸ್ಥೆಗಳ ತಜ್ಞರು ಅದು ಹೇಗೆ ಭೂಮಿಯಿಂದ ದೂರದಲ್ಲಿರುವ ಶೂನ್ಯದಲ್ಲಿ ಚಂದ್ರಯಾನ-3ರ ಪಥವನ್ನು, ಚಲನೆಯನ್ನು ನಿಖರವಾಗಿ ತಿಳಿಯುತ್ತಾರೆ?
ನ್ಯಾವಿಗೇಶನ್ (ಸಂಚರಣೆ)ಎನ್ನುವುದು ಯಾವುದೇ ಬಾಹ್ಯಾಕಾಶ ಯೋಜನೆಯ ಮಹತ್ವದ ಅಂಶವಾಗಿದೆ. ಇದು ಸಾಮಾನ್ಯವಾಗಿ ಎರಡು ಶಾಖೆಗಳನ್ನು ಹೊಂದಿದೆ. ಅವೆಂದರೆ - 'ಪೊಸಿಷನ್ ಡಿಟರ್ಮಿನೇಶನ್' (ಸ್ಥಾನ ನಿರ್ಣಯ) ಮತ್ತು 'ಆಲ್ಟಿಟ್ಯೂಡ್ ಡಿಟರ್ಮಿನೇಶನ್' (ಎತ್ತರ ನಿರ್ಣಯ). ಬಾಹ್ಯಾಕಾಶ ನೌಕೆಯ ಸ್ಥಾನವನ್ನು ಸ್ಥಿರ ನಿರ್ದೇಶಾಂಕ ವ್ಯವಸ್ಥೆಯ (ಫಿಕ್ಸ್ಡ್ ಕೋಆರ್ಡಿನೇಟ್) ಮೂಲಕ ನಿರ್ಣಯಿಸುವುದನ್ನು ಸ್ಥಾನ ನಿರ್ಣಯ ಅಥವಾ ಪೊಸಿಷನ್ ಡಿಟರ್ಮಿನೇಶನ್ ಎಂದು ಕರೆಯಲಾಗುತ್ತದೆ. ಅದೇ ರೀತಿ, ಕೋನೀಯ ನಿರ್ದೇಶಾಂಕ ವ್ಯವಸ್ಥೆಯ (ಆ್ಯಂಗ್ಯುಲಾರ್ ಕೋಆರ್ಡಿನೇಟ್ಸ್) ಮೂಲಕ ನಿರ್ಣಯಿಸುವುದನ್ನು ಆಲ್ಟಿಟ್ಯೂಡ್ ಡಿಟರ್ಮಿನೇಶನ್ ಅಥವಾ ಎತ್ತರ ನಿರ್ಣಯ ಎಂದು ಕರೆಯಲಾಗುತ್ತದೆ.
ಬಾಹ್ಯಾಕಾಶದಲ್ಲಿ ಚಂದ್ರಯಾನ-3ರ ನಿಖರ ಸಂಚರಣೆಗಾಗಿ, ಇಸ್ರೋ ಜಿಪಿಎಸ್ ವ್ಯವಸ್ಥೆಯ ಬದಲಿಗೆ 'ಸ್ಟಾರ್ ಸೆನ್ಸರ್' ಗಳನ್ನು ಬಳಸಿಕೊಂಡಿದೆ. ಈ ಸೆನ್ಸರ್‌ಗಳು ಬಾಹ್ಯಾಕಾಶ ನೌಕೆಗೆ ಅದರ ದಿಕ್ಕನ್ನು ಗುರುತಿಸಲು, ಪ್ರಗತಿಯನ್ನು ತಿಳಿಯಲು ಮತ್ತು ನಿರ್ಧರಿತ ಪಥವನ್ನು ಸ್ಥಾಪಿಸಲು ಸಹಾಯ ಮಾಡುತ್ತವೆ.
ಸ್ಟಾರ್ ಸೆನ್ಸರ್ ಒಂದು ನಿಖರ ಮಾದರಿಯ 'ಆಲ್ಟಿಟ್ಯೂಡ್ ಡಿಡರ್ಮಿನೇಶನ್' ಸೆನ್ಸರ್‌ಗಳಾಗಿವೆ. ಈ ಇಲೆಕ್ಟ್ರೋ ಆಪ್ಟಿಕಲ್ ವ್ಯವಸ್ಥೆ ನಕ್ಷತ್ರಗಳ ಗುಂಪಿನಿಂದ ಒಂದು ಚಿತ್ರವನ್ನು ತೆಗೆಯುತ್ತದೆ. ಅದನ್ನು ತನ್ನಲ್ಲಿರುವ ಅದೇ ಮಾದರಿಯ ನಕ್ಷತ್ರಗಳ ಉಲ್ಲೇಖದೊಡನೆ ಹೋಲಿಸಿ ನೋಡುತ್ತದೆ. ಆ ಮೂಲಕ ಬಾಹ್ಯಾಕಾಶ ನೌಕೆಯ ಕೋನವನ್ನು ತಿಳಿದು, ಎತ್ತರವನ್ನು ಸರಿಹೊಂದಿಸುತ್ತದೆ. ಅಂತಿಮವಾಗಿ, ಈ ಮಾಹಿತಿಯನ್ನು ಬಾಹ್ಯಾಕಾಶ ನೌಕೆಯ ಎತ್ತರವನ್ನು ಸರಿಪಡಿಸಲು ಇನರ್ಷ್ಯಲ್ ಗೈಡೆನ್ಸ್ ಮತ್ತು ಕಂಟ್ರೋಲ್ ವ್ಯವಸ್ಥೆಗೆ ಕಳುಹಿಸಲಾಗುತ್ತದೆ. ಸ್ಟಾರ್ ಸೆನ್ಸರ್‌ನಲ್ಲಿ ಬ್ಯಾಫಲ್, ಡಿಟೆಕ್ಟರ್, ಆಪ್ಟಿಕಲ್ ವ್ಯವಸ್ಥೆ ಮತ್ತು ಒಂದು ಇಲೆಕ್ಟ್ರಾನಿಕ್ ಮತ್ತು ಇಮೇಜ್ ಪ್ರೊಸೆಸಿಂಗ್ ವ್ಯವಸ್ಥೆಯಿದೆ.
ಸ್ಟಾರ್ ಸೆನ್ಸರ್‌ಗಳ ಪ್ರಾಥಮಿಕ ಕಾರ್ಯವೆಂದರೆ, ಬ್ರಹ್ಮಾಂಡದಲ್ಲಿ ಬಾಹ್ಯಾಕಾಶ ನೌಕೆ ಎಲ್ಲಿಗೆ ಚಲಿಸುತ್ತಿದೆ ಎಂದು ಕ್ಷಿಪ್ರವಾಗಿ ಮತ್ತು ನಿಖರವಾಗಿ ಲೆಕ್ಕ ಹಾಕುವುದು. ಯಾಕೆಂದರೆ, ಚಂದ್ರಯಾನದಂತಹ ಯಾವುದೇ ಯೋಜನೆಗೂ ಬಾಹ್ಯಾಕಾಶ ನೌಕೆಯ ನಿಖರವಾದ ಸ್ಥಾನವನ್ನು ಗುರುತಿಸುವುದು ಅತ್ಯಂತ ಅವಶ್ಯಕವಾಗಿದೆ. ಸ್ಟಾರ್ ಸೆನ್ಸರ್‌ಗಳು ಬಾಹ್ಯಾಕಾಶದಲ್ಲಿ ತಮ್ಮ ಫೀಲ್ಡ್ ಆಫ್ ವ್ಯೂ (ಎಫ್ಒವಿ) ನಲ್ಲಿರುವ ನಕ್ಷತ್ರಗಳನ್ನು ಗುರುತಿಸಿ, ಬಾಹ್ಯಾಕಾಶ ನೌಕೆಯ ಚಲನೆಯ ದಿಕ್ಕನ್ನು ಗುರುತಿಸಲು ಸಮರ್ಥವಾಗಿವೆ. ನಕ್ಷತ್ರಗಳು ಈ ವಿಶ್ವದಲ್ಲಿ ಒಂದೆಡೆ ಸ್ಥಿರವಾಗಿರುವುದರಿಂದ, ಎತ್ತರವನ್ನು ನಿರ್ಧರಿಸಲು ಅವುಗಳು ಅತ್ಯುತ್ತಮ ಗುರಿಗಳಾಗಿವೆ. ಆಪ್ಟಿಕಲ್ ವ್ಯವಸ್ಥೆಯಿಂದ ಪಡೆದ ಚಿತ್ರಗಳನ್ನು ಬಾಹ್ಯಾಕಾಶ ನೌಕೆಯ ಕಂಪ್ಯೂಟರ್‌ನಲ್ಲಿ ಅಳವಡಿಸಲಾಗಿರುವ ನಿಖರವಾದ ನಕ್ಷತ್ರಗಳ ಮಾಹಿತಿಗಳೊಡನೆ ಹೋಲಿಸಿ ನೋಡಲಾಗುತ್ತದೆ.