ನವದೆಹಲಿ : ತನ್ನ ಪ್ಲಾಟ್ಫಾರ್ಮ್ ಮೇಲೆ ಆನ್‌ಲೈನ್ ಗೇಮಿಂಗ್ ವೈಶಿಷ್ಟ್ಯವನ್ನು ಆರಂಭಿಸಲು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ. ಯೂಟ್ಯೂಬ್ ತನ್ನ ಆನ್‌ಲೈನ್ ಗೇಮಿಂಗ್ಗೆ ಪ್ಲೇಯೆಬಲ್ಸ್ (Playables) ಎಂದು ಹೆಸರಿಸಿದೆ. ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ಗೇಮಿಂಗ್ ಜಗತ್ತಿಗೆ ಪ್ರವೇಶಿಸುವ ಸಮಯದಲ್ಲಿಯೇ ಯೂಟ್ಯೂಬ್ ಕೂಡ ಗೇಮಿಂಗ್ ಆರಂಭಿಸುತ್ತಿರುವುದು ಗಮನಾರ್ಹ.
ವಿಡಿಯೊ ಶೇರಿಂಗ್ ಪ್ಲಾಟ್ಫಾರ್ಮ್ ಆಗಿರುವ ಯೂಟ್ಯೂಬ್ ಆನ್‌ಲೈನ್ ಗೇಮಿಂಗ್ ಅನ್ನು ಪರಿಶೀಲಿಸುತ್ತಿದೆ. ಬಳಕೆದಾರರು ತಮ್ಮ ಡೆಸ್ಕ್‌ಟಾಪ್‌ನಲ್ಲಿ ಯೂಟ್ಯೂಬ್ ವೆಬ್‌ಸೈಟ್ ಮೂಲಕ ಅಥವಾ iOS ಮತ್ತು Android ಸಾಧನಗಳಲ್ಲಿನ ಯೂಟ್ಯೂಬ್ ಅಪ್ಲಿಕೇಶನ್ ಮೂಲಕ ಗೇಮ್‌ಗಳನ್ನು ಆಡಬಹುದಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಆನ್‌ಲೈನ್ ಗೇಮಿಂಗ್ ಆರಂಭಿಸುವ ಬಗ್ಗೆ ಯೂಟ್ಯೂಬ್ ಆಂತರಿಕವಾಗಿ ಪರಿಶೀಲನೆ ಮಾಡುತ್ತಿದೆ ಎಂದು ಯೂಟ್ಯೂಬ್ನ ಒಡೆತನ ಹೊಂದಿರುವ ಗೂಗಲ್ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್ನಲ್ಲಿ ಹೇಳಲಾಗಿದೆ. ವಿಡಿಯೊ ಹೋಸ್ಟಿಂಗ್ ಅನ್ನು ಮೀರಿ ಸುಲಭವಾಗಿ ಆಡಬಹುದಾದ ಮತ್ತು ಬಳಕೆದಾರರ ನಡುವೆ ಹಂಚಿಕೊಳ್ಳಬಹುದಾದ ಗೇಮಿಂಗ್ ಅನ್ನು ಪರಿಚಯಿಸುವುದು ಗೂಗಲ್ನ ಮಹತ್ವಾಕಾಂಕ್ಷೆಯಾಗಿದೆ.
ಶತಕೋಟಿ ಮಾಸಿಕ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್, ಈಗಾಗಲೇ ಗೇಮರುಗಳಿಗಾಗಿ ಜನಪ್ರಿಯ ತಾಣವಾಗಿದೆ. ಹೊಸ ಗೇಮಿಂಗ್ ವೈಶಿಷ್ಟ್ಯವು ಸ್ಟ್ಯಾಕ್ ಬೌನ್ಸ್‌ನಂತಹ ಆರ್ಕೇಡ್-ಶೈಲಿಯ ಆಟಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಆಟಗಾರರು ಇಟ್ಟಿಗೆಗಳ ಪದರುಗಳ ಮೂಲಕ ಸ್ಮ್ಯಾಶ್ ಮಾಡಲು ಪುಟಿಯುವ ಚೆಂಡನ್ನು ಬಳಸುತ್ತಾರೆ. ಗೇಮಿಂಗ್ ಬಗ್ಗೆ ಯೂಟ್ಯೂಬ್ ಬಹಳ ಹಿಂದಿನಿಂದಲೂ ತುಂಬಾ ಆಸಕ್ತಿ ವಹಿಸಿದೆ. ಈ ವಿಷಯದಲ್ಲಿ ನಾವು ಯಾವಾಗಲೂ ಹೊಸ ವೈಶಿಷ್ಟ್ಯಗಳೊಂದಿಗೆ ಪ್ರಯೋಗ ಮಾಡುತ್ತಿದ್ದೇವೆ. ಆದರೆ ಸದ್ಯದ ಮಟ್ಟಿಗೆ ಈ ವಿಚಾರದಲ್ಲಿ ಘೋಷಿಸಲು ಏನೂ ಇಲ್ಲ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.