ಕರ್ನಾಟಕ

karnataka

ETV Bharat / science-and-technology

ಯೂಟ್ಯೂಬ್​ ಸಿಇಒ ವೊಜ್ಸಿಕಿ ರಾಜೀನಾಮೆ ಘೋಷಣೆ: ನೂತನ ಸಿಇಒ ಆಗಿ ಭಾರತ ಮೂಲದ ನೀಲ್ ಮೋಹನ್​ ನೇಮಕ - ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಹಾಲಿ ಸಿಇಒ ಸೂಸನ್​ ವೊಜ್ಸಕಿ ನಿನ್ನೆಯಷ್ಟೆ ಬ್ಲಾಗ್​ಪೋಸ್ಟ್​ ಮೂಲಕ ತಮ್ಮ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆ ಮಾಡಿದ್ದರು.

Indian Origin Neil Mohan Appointed as New CEO
ನೂತನ ಸಿಇಒ ಆಗಿ ಭಾರತ ಮೂಲದ ನೀಲ್ ಮೋಹನ್​ ನೇಮಕ

By

Published : Feb 17, 2023, 10:34 AM IST

ನ್ಯೂಯಾರ್ಕ್: ಜಗತ್ತಿನ ಅತಿದೊಡ್ಡ ಆನ್​ಲೈನ್​ ವೀಡಿಯೋ ಶೇರಿಂಗ್ ಪ್ಲ್ಯಾಟ್​ಫಾರಂ ಯೂಟ್ಯೂಬ್​ನ ನೂತನ ಸಿಇಒ (ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ) ಆಗಿ ಭಾರತ ಮೂಲದ ಅಮೆರಿಕಾ ನಿವಾಸಿ, ಯೂಟ್ಯೂಬ್‌ನ ಹಿರಿಯ ಜಾಹೀರಾತು ಮತ್ತು ಉತ್ಪನ್ನ ಕಾರ್ಯನಿರ್ವಾಹಕರು (ಚೀಫ್​ ಪ್ರೊಡಕ್ಟ್​ ಆಫಿಸರ್​) ನೀಲ್ ಮೋಹನ್​ ನೇಮಕಗೊಂಡಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಸುದೀರ್ಘ ಕಾಲ ಜಾಗತಿಕ ಆನ್‌ಲೈನ್ ವಿಡಿಯೋ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದ ಯೂಟ್ಯೂಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಸಾನ್ ವೊಜ್ಸಿಕಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದು, ಅವರ ಸ್ಥಾನಕ್ಕೆ ಭಾರತೀಯ - ಅಮೆರಿಕನ್ ನೀಲ್​ ಮೋಹನ್​ ನೇಮಕಗೊಂಡಿದ್ದು, ಯೂಟ್ಯೂಬ್​ನ ಚುಕ್ಕಾಣಿ ಹಿಡಿಯಲಿದ್ದಾರೆ. ತಮ್ಮ ರಾಜೀನಾಮೆಯ ಬಗ್ಗೆ ಗುರುವಾರ ಬ್ಲಾಗ್​ ಪೋಸ್ಟ್​ನಲ್ಲಿ ಸುಸಾನ್ ವೊಜ್ಸಿಕಿ ಮಾಹಿತಿ ಹಂಚಿಕೊಂಡಿದ್ದಾರೆ.

54 ವರ್ಷದ ಸುಸಾನ್ ವೊಜ್ಸಿಕಿ ಗುರುವಾರ ಹಂಚಿಕೊಂಡ ಬ್ಲಾಗ್​ಪೋಸ್ಟ್​ನಲ್ಲಿ 'ಇವತ್ತು, ಸುಮಾರು 25 ವರ್ಷಗಳು ಗೂಗಲ್​ನಲ್ಲಿ ಸೇವೆ ಸಲ್ಲಿಸಿದ ನಂತರ ಯೂಟ್ಯೂಬ್​ ಮುಖ್ಯಸ್ಥರ ಹುದ್ದೆಯ ಮೂಲಕ ಇಲ್ಲಿಂದ ತೆರವುಗೊಳ್ಳಬೇಕು. ನನಗಿಷ್ಟವಾದ ನನ್ನ ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳ ಬಗ್ಗೆ ಗಮನಹರಿಸಿ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಿದ್ದೇನೆ. ಯೂಟ್ಯೂಬ್‌ನ 'ಮುಖ್ಯ ಉತ್ಪನ್ನ ಅಧಿಕಾರಿ' ನೀಲ್ ಮೋಹನ್ ಅವರು ಯೂಟ್ಯೂಬ್‌ನ ಹೊಸ ಮುಖ್ಯಸ್ಥರಾಗಲಿದ್ದಾರೆ' ಎಂದು ತಿಳಿಸಿದ್ದಾರೆ.

'ನಮ್ಮಲ್ಲಿ ಈಗ ಪ್ರಚಂಡ ತಂಡ ಇರುವುದರಿಂದ ಹುದ್ದೆಗೆ ರಾಜೀನಾಮೆ ನೀಡಲು ಇದು ಸರಿಯಾದ ಸಮಯ, ಒಂಬತ್ತು ವರ್ಷಗಳ ಹಿಂದೆ ನಾನು ಯೂಟ್ಯೂಬ್‌ಗೆ ಸೇರಿದಾಗ, ಉತ್ತಮ ನಾಯಕತ್ವದ ತಂಡವನ್ನು ತರುವುದು ನನ್ನ ಮೊದಲ ಆದ್ಯತೆಯಾಗಿತ್ತು. ಅಂತಹ ಜನರಲ್ಲಿ ನೀಲ್ ಮೋಹನ್ ಒಬ್ಬರು, ಮತ್ತು ಅವರು ಎಸ್‌ವಿಪಿ ಮತ್ತು ಯೂಟ್ಯೂಬ್‌ನ ಹೊಸ ಮುಖ್ಯಸ್ಥರಾಗುತ್ತಾರೆ' ಎಂದು ಹೇಳಿದ್ದಾರೆ.

ಟಿಕ್‌ಟಾಕ್ ಮತ್ತು ಫೇಸ್‌ಬುಕ್‌ನ ರೀಲ್ಸ್‌ನಂತಹ ಕಿರು - ರೂಪದ ವಿಡಿಯೊ ಸೇವೆಗಳು ಮತ್ತು ನೆಟ್‌ಫ್ಲಿಕ್ಸ್‌ನಂತಹ ಸ್ಟ್ರೀಮಿಂಗ್ ಸೇವೆಗಳೊಂದಿಗೆ ವೀಕ್ಷಣಾ ಸಮಯದ ತೀವ್ರ ಪೈಪೋಟಿಯ ನಡುವೆ ಯೂಟ್ಯೂಬ್‌ನ ಜಾಹೀರಾತು ಆದಾಯವು ಎರಡನೇ ನೇರ ತ್ರೈಮಾಸಿಕಕ್ಕೆ ಕುಸಿದಿದ್ದರಿಂದ ಸಿಬ್ಬಂದಿ ಬದಲಾವಣೆಯು ಅನಿವಾರ್ಯವಾಗಿದೆ.

ಸುಸಾನ್​ ವೊಜ್ಸಿಕಿ ಅವರು ಗೂಗಲ್​ನ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರು. ಸುಮಾರು 25 ವರ್ಷಗಳಿಂದ ಪೋಷಕ ಕಂಪನಿ Alphabet Inc ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೂಗಲ್​ಗೆ ಸೇರಿಕೊಳ್ಳುವ ಮೊದಲು ಸುಸಾನ್​ ವೊಜ್ಸಿಕಿ ಇಂಟೆಲ್ ಕಾರ್ಪ್ ಮತ್ತು ಬೈನ್ & ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಜಾಹೀರಾತು ಉತ್ಪನ್ನಗಳಿಗೆ ಹಿರಿಯ ಉಪಾಧ್ಯಕ್ಷರಾಗಿದ್ದ ಸುಸಾನ್​ ವೊಜ್ಸಿಕಿ 2014ರಲ್ಲಿ ಯೂಟ್ಯೂಬ್​ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ (ಸಿಇಓ) ಹುದ್ದೆ ಅಲಂಕರಿಸಿದ್ದರು.

ಯೂಟ್ಯೂಬ್​ನ ಸಿಇಒ ಆಗಿ ನೇಮಕಗೊಂಡಿರುವ ಭಾರತ ಮೂಲದ ಅಮೆರಿಕಾ ನಿವಾಸಿ ನೀಲ್​ ಮೋಹನ್​ ಅವರು ಸ್ಟ್ಯಾನ್​ಫೋರ್ಡ್​ನಿಂದ ಪದವೀಧರರು. 2015ರಲ್ಲಿ ಯೂಟ್ಯೂಬ್​ನ ಮುಖ್ಯ ಉತ್ಪನ್ನ ಅಧಿಕಾರಿಯಾಗಿ ನೇಮಕಗೊಂಡರು. ಯೂಟ್ಯೂಬ್​ ಕಿರುವೀಡಿಯೋಗಳು, ಮ್ಯೂಸಿಕ್​, ಸಬ್​ಸ್ಕ್ರಿಪ್ಷನ್​ ಆಯ್ಕೆಗಳ ಬಳಕೆದಾರರಿಗೆ ನೀಡುವಲ್ಲಿ ಕಾರ್ಯನಿರ್ವಹಿಸಿದವರು ಇವರು. 2008ರಿಂದ ಗೂಗಲ್​ ತಂಡವನ್ನು ಸೇರಿಕೊಂಡಿದ್ದ ನೀಲ್​ ಮೋಹನ್​ ಅವರು ಅದೇ ವರ್ಷ ಗೂಗಲ್​ ಸ್ವಾಧೀನಪಡಿಸಿಕೊಂಡಿದ್ದ ಡಬಲ್​ಕ್ಲಿಕ್​ ಕಂಪನಿಯಲ್ಲಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ಸುಮಾರು ಎಂಟು ವರ್ಷಗಳ ಕಾಲ ಗೂಗಲ್‌ನಲ್ಲಿ ಪ್ರದರ್ಶನ ಮತ್ತು ವೀಡಿಯೊ ಜಾಹೀರಾತುಗಳ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಇದನ್ನೂ ಓದಿ:ಮಾರ್ಕ್ ಜುಕರ್‌ಬರ್ಗ್ ಭದ್ರತೆಗೆ ಮೆಟಾ ಕಂಪನಿ ಮಾಡ್ತಿರುವ ಖರ್ಚೆಷ್ಟು ಗೊತ್ತೇ?

ABOUT THE AUTHOR

...view details