ನವದೆಹಲಿ: ಟ್ವಿಟರ್ ಪ್ಲಾಟ್ಫಾರ್ಮ್ನ ಹೆಸರನ್ನು ಎಕ್ಸ್ (X) ಎಂದು ಮರುನಾಮಕರಣ ಮಾಡಿದ ನಂತರ ಈಗ 'ಟ್ವೀಟ್' ಎಂಬುದನ್ನು 'ಪೋಸ್ಟ್' ಎಂದು ಬದಲಾಯಿಸಲಾಗಿದೆ. ಅಂದರೆ ಇನ್ನು ಮುಂದೆ ಎಕ್ಸ್ನಲ್ಲಿ ನೀವು ಬರೆಯುವುದು ಟ್ವೀಟ್ ಅಲ್ಲ, ಬದಲಾಗಿ ಪೋಸ್ಟ್ ಅಂತ ಅರ್ಥ. ಹಾಗೆಯೇ ರಿಟ್ವೀಟ್ ಎಂಬುದು ರಿಪೋಸ್ಟ್ ಅಂತ ಆಗಿರುತ್ತದೆ. ಎಕ್ಸ್ ಈ ಬಗ್ಗೆ ಹೊಸ ನಿಯಮಾವಳಿಗಳನ್ನು ಜಾರಿ ಮಾಡಿದ್ದು, ಇದು ಸೆಪ್ಟೆಂಬರ್ 29 ರಿಂದ ಜಾರಿಯಾಗಲಿದೆ. ನಿಯಮಾವಳಿಗಳಲ್ಲಿ ಎಲ್ಲೆಲ್ಲಿ ಟ್ವಿಟರ್ ಅಂತ ಇತ್ತೋ ಅದೆಲ್ಲವನ್ನು ಎಕ್ಸ್ ಎಂಬ ಅಕ್ಷರದಿಂದ ಬದಲಾಯಿಸಲಾಗಿದೆ.
ಅಲ್ಲದೆ, ಹೊಸ ಸೇವಾ ನಿಯಮದ ಪ್ರಕಾರ X ಅನ್ನು ಬಳಸುವ ಮೂಲಕ, "ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ, ಯಾವುದೇ ಉದ್ದೇಶಿತ ವರ್ಗ ಕ್ರಿಯೆ, ಸಾಮೂಹಿಕ ಕ್ರಿಯೆ ಅಥವಾ ಪ್ರತಿನಿಧಿ ಕ್ರಮ ಪ್ರಕ್ರಿಯೆಯಲ್ಲಿ ವಾದಿ ಅಥವಾ ವರ್ಗ ಸದಸ್ಯರಾಗಿ ಭಾಗವಹಿಸುವ ಹಕ್ಕನ್ನು ಸಹ ನೀವು ಮನ್ನಾ ಮಾಡುತ್ತೀರಿ" ಎಂದು ಹೇಳಲಾಗಿದೆ.
ಎಕ್ಸ್ ಕಾರ್ಪ್ ಈಗ ಬಳಕೆದಾರರ ಬಯೋಮೆಟ್ರಿಕ್ ಡೇಟಾ ಮತ್ತು ಉದ್ಯೋಗ ಇತಿಹಾಸವನ್ನು ಸಂಗ್ರಹಿಸಲು ಅನುಮತಿ ಕೋರಲಿದೆ. "ಬಯೋಮೆಟ್ರಿಕ್ ಮಾಹಿತಿ" ಮತ್ತು "ಉದ್ಯೋಗ ಇತಿಹಾಸ" ಕ್ಕಾಗಿ ನಿಯಮಾವಳಿಗಳನ್ನು ಸೇರಿಸಲು ಎಕ್ಸ್ ಕಾರ್ಪ್ ತನ್ನ ಗೌಪ್ಯತೆ ನೀತಿಯನ್ನು ಪರಿಷ್ಕರಿಸಿದೆ. "ನಿಮ್ಮ ಸಮ್ಮತಿಯ ಆಧಾರದ ಮೇಲೆ, ಸುರಕ್ಷತೆ, ಭದ್ರತೆ ಮತ್ತು ಗುರುತನ್ನು ಖಚಿತಪಡಿಸಿಕೊಳ್ಳುವ ಉದ್ದೇಶಗಳಿಗಾಗಿ ನಾವು ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಬಳಸಬಹುದು" ಎಂದು ಹೊಸ ಗೌಪ್ಯತೆ ನೀತಿಯಲ್ಲಿ ತಿಳಿಸಲಾಗಿದೆ.