ಶ್ರೀಹರಿಕೋಟಾ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಸಣ್ಣ ಪ್ರಮಾಣದ ರಾಕೆಟ್ ವಾಹಕದಲ್ಲಿ ಹಾರಿಬಿಟ್ಟಿದ್ದ ಎರಡು ಉಪಗ್ರಹಗಳು ನಿಗದಿತ ಕಕ್ಷೆ ಸೇರದೇ ವಿಫಲಗೊಂಡಿವೆ. ಇದು ಅತ್ಯಂತ ನಿಖರ, ಕರಾರುವಾಕ್ ಉಡಾವಣೆ ಮಾಡುವ ಇಸ್ರೋದ ವೈಫಲ್ಯ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ವಿದ್ಯಾರ್ಥಿಗಳು ರೂಪಿಸಿದ್ದ 8 ಕೆಜಿ ತೂಕದ ಆಜಾದಿ ಸ್ಯಾಟ್ ಮತ್ತು ಇಸ್ರೋ ನಿರ್ಮಿತ ಭೂಪರಿಭ್ರಮಣ ಉಪಗ್ರಹ ನಿನ್ನೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಎಸ್ಎಸ್ಎಲ್ವಿ(ಸ್ಮಾಲ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್) ಯಿಂದ ಉಡಾವಣೆ ಮಾಡಲಾಗಿತ್ತು. ಆದರೆ, ಅದು ನಿಗದಿತ ಕಕ್ಷೆಗೆ ಸೇರದೇ ಕೊನೆಯಲ್ಲಿ ಸಂಪರ್ಕ ಕಳೆದುಕೊಂಡಿದೆ.
ಉಪಗ್ರಹಕ್ಕೆ ಏನಾಯ್ತು:ಸಣ್ಣ ಉಪಗ್ರಹ ಉಡಾವಣಾ ವಾಹನದಿಂದ ಉಡಾಯಿಸಲಾದ ಉಪಗ್ರಹಗಳು ಸೆನ್ಸಾರ್ ಸಮಸ್ಯೆಯಿಂದಾಗಿ ತಪ್ಪಾದ ಕಕ್ಷೆ ಸೇರಿವೆ. ಎಸ್ಎಸ್ಎಲ್ವಿಯ ವಿಟಿಎಂ ಅಂದರೆ ವೆಲಾಸಿಟಿ ಟ್ರಿಮ್ಮಿಂಗ್ ಮಾಡ್ಯೂಲ್ ಹಂತದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಉಡಾವಣೆಯಾದ 650 ಸೆಕೆಂಡುಗಳಲ್ಲಿ 20 ಸೆಕೆಂಡ್ ವಿಟಿಎಂ ದಹಿಸಬೇಕಿತ್ತು. ಆದರೆ, ಕೇವಲ 0.1 ಸೆಕೆಂಡುಗಳ ಕಾಲ ದಹಿಸಿದ್ದರಿಂದ ರಾಕೆಟ್ ನಿಗದಿತ ಎತ್ತರಕ್ಕೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಸ್ರೋ ಹೇಳಿದೆ.
ಇದು ಅಪರೂಪದ ವೈಫಲ್ಯ:ಇಸ್ರೋ ತನ್ನ 5 ದಶಕಗಳ ಕಾರ್ಯಾಚರಣೆಯಲ್ಲಿ ಬಲು ಅಪರೂಪದ ವೈಫಲ್ಯ ಕಂಡಿದೆ. ಈವರೆಗೂ 36 ದೇಶಗಳ 346 ಉಪಗ್ರಹಗಳನ್ನು ಉಡ್ಡಯನ ಮಾಡಿದ್ದು, ಇದರಲ್ಲಿ ಕೇವಲ 9 ಮಾತ್ರ ವಿಫಲವಾಗಿವೆ. ಕಳೆದ ವರ್ಷ ಜಿಎಸ್ಎಲ್ವಿ ಎಂಕೆ 2 ರಾಕೆಟ್ ಮೂಲಕ ಉಡ್ಡಯನ ಮಾಡಲಾಗಿದ್ದ ಉಪಗ್ರಹವನ್ನು ಕಕ್ಷೆ ಸೇರಿಸದೇ ವೈಫಲ್ಯ ಅನುಭವಿಸಿತ್ತು.