ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿವೆ. ಅದರಲ್ಲೂ ಟ್ವಿಟರ್ ಇದರಲ್ಲಿ ಮುಂಚೂಣಿಯಲ್ಲಿದೆ. ಆದರೆ, ಕೆಲವೊಮ್ಮೆ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗೇಕೆ? ಇದಕ್ಕೆ ಕಾರಣವಾಗುವ ಅಂಶಗಳೇನು?
ನಿಯಮ ಉಲ್ಲಂಘಿಸಿದರೆ ಹುಷಾರ್!: ನೆಟಿಜನ್‌ಗಳು ಟ್ವಿಟರ್‌ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ. ಆದರೆ, ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಇದೇ ಚರ್ಚೆಯ ವಿಷಯವಾಗಿದೆ. ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಈ ಕಂಪನಿಯನ್ನು ಖರೀದಿಸಲು ಮುಂದಾದಾಗಿನಿಂದ ಅದರ ಮಾಲೀಕತ್ವದ ನಿರ್ಧಾರದವರೆಗೆ ಎಲ್ಲವೂ ಸುದ್ದಿಯಲ್ಲಿದೆ. ಮತ್ತೊಂದೆಡೆ ಟ್ವಿಟರ್ ಖಾತೆಗಳನ್ನು ಅಮಾನತು ಮಾಡುವುದು ಸ್ವಲ್ಪ ಸಮಯದಿಂದ ನಡೆಯುತ್ತಿದೆ. ಇದೆಲ್ಲ ಏಕೆ ನಡೆಯುತ್ತಿದೆ? ಇದಕ್ಕೆ ಕಾರಣವೇನು?
ಒಂದು ಕಾಲದಲ್ಲಿ ಸೆಲೆಬ್ರಿಟಿಗಳು ಮಾತ್ರ ಬಳಸುತ್ತಿದ್ದ ಟ್ವಿಟರ್ ಈಗ ಎಲ್ಲರಿಗೂ ಲಭ್ಯವಿದೆ. ಟ್ವಿಟರ್‌ನಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ, ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಜನರು ಈ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಖಾತೆಯನ್ನು ಹೊಂದಿದ್ದಾರೆ. ಆದರೆ, ಕೆಲವೊಮ್ಮೆ ಕೆಲವೊಬ್ಬರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್, ಬಾಲಿವುಡ್ ನಟಿ ಕಂಗನಾ ರಣಾವತ್, ಕೆಲವು ಬಿಜೆಪಿ ನಾಯಕರು ಮತ್ತು ಇತ್ತೀಚೆಗೆ 'ಕಾಂತಾರ' ನಟ ಕಿಶೋರ್ ಅವರ ಖಾತೆಗಳನ್ನು ಅಮಾನತುಗೊಳಿಸಲಾಗಿದೆ.
ಯಾರೋ ಒಬ್ಬರ ಟ್ವಿಟರ್ ಖಾತೆ ಅಮಾನತಾಗಿದೆ ಎಂದರೆ.. ಅವರು Twitter ನ ನೀತಿಯನ್ನು ಉಲ್ಲಂಘಿಸಿದ್ದಾರೆ ಅಥವಾ ಅವರ ಅಕೌಂಟ್ನಿಂದ ಭದ್ರತಾ ಉಲ್ಲಂಘನೆ ನಡೆದಿದೆ ಎಂದು ಅರ್ಥ. ನಿಜವಾಗಿಯೂ ಖಾತೆ ಅಮಾನತಿಗೆ ಕಾರಣವಾಗುವ ಅಂಶಗಳು ಹೀಗಿವೆ. ಅಮಾನತುಗೊಂಡಿರುವ ಬಹುತೇಕ ಖಾತೆಗಳು ನಕಲಿ ಅಥವಾ ಸ್ಪ್ಯಾಮ್ ಆಗಿರುತ್ತವೆ. ಇಂತಹ ಖಾತೆಗಳು ಟ್ವಿಟರ್ ಬಳಕೆದಾರರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಬಹುದು. ಅದಕ್ಕಾಗಿಯೇ ಕಂಪನಿಯು ಅಂಥ ಖಾತೆಗಳನ್ನು ಅಮಾನತುಗೊಳಿಸುತ್ತದೆ. ಖಾತೆ ಹ್ಯಾಕ್ ಆಗಿದ್ದರೆ ಅಥವಾ ವೈಯಕ್ತಿಕ ವಿವರಗಳು ಸೋರಿಕೆಯಾದಲ್ಲಿ ಬಳಕೆದಾರರ ಸುರಕ್ಷತಾ ಕಾರಣಗಳಿಗಾಗಿ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ. ಸುರಕ್ಷತೆಯನ್ನು ಖಾತ್ರಿಪಡಿಸಿದ ನಂತರ ಖಾತೆಯನ್ನು ಮರುಸ್ಥಾಪಿಸಲಾಗುತ್ತದೆ.