ನವದೆಹಲಿ : ವಾಟ್ಸ್ಆ್ಯಪ್ ಬಳಕೆದಾರರು ಶೀಘ್ರದಲ್ಲೇ ತಾವು ಕಳುಹಿಸಿದ ಮೆಸೇಜುಗಳನ್ನು ಎಡಿಟ್ ಮಾಡುವ ವೈಶಿಷ್ಟ್ಯ ಪಡೆಯಲಿದ್ದಾರೆ. ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಬಹಳ ಸಮಯದಿಂದಲೂ ಕಾಯುತ್ತಿದ್ದರು. iOS 23.6.0.74 ಅಪ್‌ಡೇಟ್‌ಗಾಗಿ ಇತ್ತೀಚಿನ WhatsApp ಬೀಟಾ ಹೊಸ ಅಲರ್ಟ್ ನೀಡುವ ವ್ಯವಸ್ಥೆಯೊಂದನ್ನು ತಯಾರಿಸುತ್ತಿದೆ. ಬಳಕೆದಾರರು ತಾವು ಮೆಸೇಜ್ ಒಂದನ್ನು ಎಡಿಟ್ ಮಾಡಿದಾಗ ಹಾಗೂ ಅದು ಚಾಟ್ನಲ್ಲಿರುವ ಎಲ್ಲರಿಗೂ ತಲುಪಿದೆ ಎಂಬುದನ್ನು ತಿಳಿಸಲಿದೆ ಈ ಅಲರ್ಟ್. ಈ ವಾಟ್ಸ್ಆ್ಯಪ್ ವೈಶಿಷ್ಟ್ಯವು ಯಾವುದೇ ತಪ್ಪುಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಸರಿಪಡಿಸಲು ಬಳಕೆದಾರರಿಗೆ ಅವಕಾಶ ನೀಡಲಿದೆ.
ವರದಿಯ ಪ್ರಕಾರ, ಬಳಕೆದಾರರು ತಮ್ಮ ಮೆಸೇಜ್ಗಳನ್ನು ಕಳುಹಿಸಿದ 15 ನಿಮಿಷಗಳಲ್ಲಿ ಎಡಿಟ್ ಮಾಡಲು ಸಾಧ್ಯವಾಗಲಿದೆ ಮತ್ತು ಎಡಿಟ್ ಮಾಡಿದ ಮೆಸೇಜುಗಳನ್ನು ಬಬಲ್‌ನಲ್ಲಿ ಎಡಿಟೆಡ್ (edited) ಲೇಬಲ್‌ನೊಂದಿಗೆ ಗುರುತಿಸಲಾಗುತ್ತದೆ. ಇದು ಮೆಸೇಜ್ಗಳಲ್ಲಿ 'ಫಾರ್ವರ್ಡ್ ಮಾಡಲಾದ' (Forwarded) ಟ್ಯಾಗ್ ಅನ್ನು ಹೋಲುತ್ತದೆ. ಆದಾಗ್ಯೂ, ಈ ವೈಶಿಷ್ಟ್ಯ ಬಳಸಲು ಒಂದು ಷರತ್ತಿದೆ. ಈ ವೈಶಿಷ್ಟ್ಯವು ವಾಟ್ಸ್ಆ್ಯಪ್ನ ಇತ್ತೀಚಿನ ಆವೃತ್ತಿಯಲ್ಲಿರುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.
ಹಳೆಯ ಆವೃತ್ತಿಯನ್ನು ಬಳಸುತ್ತಿರುವವರು ಈ ವೈಶಿಷ್ಟ್ಯದೊಂದಿಗೆ ಹೊಂದಿಕೊಳ್ಳುವ ಇತ್ತೀಚಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡುವವರೆಗೆ ಎಡಿಟೆಡ್ ಮೆಸೇಜುಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅಂದರೆ ನಿಮ್ಮ ಫೋನ್‌ನಲ್ಲಿ ಈ ಹೊಸ ವೈಶಿಷ್ಟ್ಯವು ಸಕ್ರಿಯವಾಗಿದ್ದರೂ ಸಹ, ಮೆಸೇಜನ್ನು ಸ್ವೀಕರಿಸುವವರು ಅಪ್ಲಿಕೇಶನ್‌ನ ನವೀಕರಿಸಿದ ಆವೃತ್ತಿಯನ್ನು ಹೊಂದಿದ್ದರೆ ಮಾತ್ರ ತಿದ್ದುಪಡಿ ಮಾಡಿದ್ದು ಕಾಣಿಸುತ್ತದೆ.
ವಾಟ್ಸ್ಆ್ಯಪ್ ಇತ್ತೀಚೆಗೆ ವಿಂಡೋಸ್ ಬಳಕೆದಾರರಿಗಾಗಿ ಹೊಸ ಅಪ್ಲಿಕೇಶನ್ ಒಂದನ್ನು ಘೋಷಿಸಿದೆ. ವಿಂಡೋಸ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಈ ಹೊಸ ಆವೃತ್ತಿಯು ವೇಗವಾಗಿ ಲೋಡ್ ಆಗುತ್ತದೆ ಮತ್ತು ವಾಟ್ಸ್ ಆ್ಯಪ್ ಮತ್ತು ವಿಂಡೋಸ್ ಬಳಕೆದಾರರಿಗೆ ಬಳಸಲು ಸುಲಭವಾಗಿರುವಂತೆ ಇಂಟರ್‌ಫೇಸ್‌ನೊಂದಿಗೆ ನಿರ್ಮಿಸಲಾಗಿದೆ. ಬಳಕೆದಾರರು 8 ಜನರೊಂದಿಗೆ ಗ್ರೂಪ್ ವೀಡಿಯೊ ಕರೆಗಳನ್ನು ಮತ್ತು 32 ಜನರೊಂದಿಗೆ ಆಡಿಯೊ ಕರೆಗಳನ್ನು ಹೋಸ್ಟ್ ಮಾಡಬಹುದು. ಕಾಲಾನಂತರದಲ್ಲಿ ಈ ಮಿತಿಗಳನ್ನು ಹೆಚ್ಚಿಸಲಾಗುವುದು ಎಂದು ವಾಟ್ಸ್ಆ್ಯಪ್ ಹೇಳಿದೆ.
ವಾಟ್ಸ್ಆ್ಯಪ್ನಲ್ಲಿ ಮತ್ತಷ್ಟು ಹೊಸ ಫೀಚರ್ಗಳು: ಆ್ಯಂಡ್ರಾಯ್ಡ್, iOS ಮತ್ತು ವಿಂಡೋಸ್ ಸಾಧನಗಳಲ್ಲಿನ ಬಳಕೆದಾರರಿಗಾಗಿ ವಾಟ್ಸ್ಆ್ಯಪ್ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಮೆಟಾ ಮಾಲೀಕತ್ವದ ತ್ವರಿತ ಸಂದೇಶ ಪ್ಲಾಟ್ಫಾರ್ಮ್ ಆಗಿರುವ ವಾಟ್ಸ್ಆ್ಯಪ್ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಸಂವಹನವನ್ನು ಉತ್ತಮಗೊಳಿಸಲು ಹೊಸ ಅಪ್‌ಗ್ರೇಡ್ ಅನ್ನು ಹೊರತಂದಿದೆ.ಇದರ ಮುಂದುವರಿದ ಭಾಗವಾಗಿ ವಾಟ್ಸ್ಆ್ಯಪ್ ಐಫೋನ್ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಅದು ಪರಸ್ಪರ ಸಂಕ್ಷಿಪ್ತ ವೀಡಿಯೊ ಚಾಟ್‌ಗಳನ್ನು ಕಳುಹಿಸಲು ಅನುವು ಮಾಡಿಕೊಡಲಿದೆ.
ಕ್ಯಾಮರಾ ಬಟನ್ ಅನ್ನು ಒತ್ತುವ ಮೂಲಕ, ವಾಟ್ಸ್ಆ್ಯಪ್ನ ಹೊಸ ವೀಡಿಯೊ ಸಂದೇಶದ ವೈಶಿಷ್ಟ್ಯದ ಬಳಕೆದಾರರು ತಮ್ಮ ಸ್ನೇಹಿತರಿಗೆ 60 ಸೆಕೆಂಡುಗಳವರೆಗೆ ಇರಬಹುದಾದ ಸಂಕ್ಷಿಪ್ತ ವೀಡಿಯೊಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇದು ಟೆಲಿಗ್ರಾಮ್‌ನ ವೀಡಿಯೊ ನೋಟ್ಸ್ ಮಾದರಿಯಲ್ಲಿ ಕೆಲಸ ಮಾಡಲಿದೆ. ಮೂಲಗಳ ಪ್ರಕಾರ, ಈ ಕಾರ್ಯವನ್ನು ಪ್ರಸ್ತುತ ವಾಟ್ಸ್ಆ್ಯಪ್ iOS ಅಪ್ಲಿಕೇಶನ್‌ಗಾಗಿ ತಯಾರು ಮಾಡಲಾಗುತ್ತಿದೆ ಮತ್ತು ವಾಟ್ಸ್ಆ್ಯಪ್ನ ಮುಂದಿನ ಬಿಡುಗಡೆಗಳಲ್ಲಿ ಮತ್ತು ಪರೀಕ್ಷೆಗಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುವುದು.
ಇದನ್ನೂ ಓದಿ:ತಾನಾಗಿಯೇ ಇಂಟರ್ನೆಟ್ ಬ್ರೌಸ್ ಮಾಡುತ್ತೆ ಚಾಟ್ಜಿಪಿಟಿ: ಹೊಸ ಪ್ಲಗಿನ್ ಕೈಚಳಕ!