ವಾಷಿಂಗ್ಟನ್ (ಅಮೆರಿಕ) :ಪ್ರಪಂಚದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಇದೀಗ 'WhatsApp Channels' ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಚಾನಲ್‌ಗಳ ವೈಶಿಷ್ಟ್ಯವು ಉದ್ಯಮಿಗಳಿಗೆ ಮತ್ತು ವಿಷಯ ರಚನೆಕಾರರಿಗೆ ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಚಾನಲ್ ವೈಶಿಷ್ಟ್ಯದ ಬಳಕೆದಾರರು ಕಾಲಕಾಲಕ್ಕೆ ಬೇಕಾದ ಅಪ್‌ಡೇಟ್ಸ್ ಬಗ್ಗೆ ತಿಳಿಯಬಹುದಾಗಿದೆ. ಈ ಫೀಚರ್ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿರಲಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು ಶೀಘ್ರದಲ್ಲೆ ಎಲ್ಲಾ ವಾಟ್ಸ್ಆ್ಯಪ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮೆಟಾ ಕಂಪನಿ ತಿಳಿಸಿದೆ.
ವಾಟ್ಸ್ಆ್ಯಪ್ ಚಾನೆಲ್ ವೈಶಿಷ್ಟ್ಯ:ವಾಟ್ಸ್ಆ್ಯಪ್ ಚಾನಲ್ ವೈಶಿಷ್ಟ್ಯವು ಟೆಲಿಗ್ರಾಮ್‌ನ ಚಾನಲ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಚಾನೆಲ್ ವೈಶಿಷ್ಟ್ಯದ ಸಹಾಯದಿಂದ, ನೀವು ಆಯ್ದ WhatsApp ಗುಂಪಿನಲ್ಲಿ ನಿಮ್ಮ ಸಂದೇಶಗಳನ್ನು ಪ್ರಸಾರ ಮಾಡಬಹುದಾಗಿದೆ. WhatsApp ಚಾನೆಲ್ ವೈಶಿಷ್ಟ್ಯವು ಮುಖ್ಯವಾಗಿ ಕಾಲೇಜುಗಳು, ಸಂಸ್ಥೆಗಳು ಮತ್ತು ಕಂಪನಿಗಳಿಗೆ ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ.
ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನೇರವಾಗಿ ವಾಟ್ಸ್ಆ್ಯಪ್ ನಲ್ಲಿ ಪ್ರಮುಖ ಅಪಡೇಟ್ಸ್ ಪಡೆಯಲು ಇದು ಸುಲಭವಾದ ಮಾರ್ಗವಾಗಿದೆ. ಈ 'ಚಾನೆಲ್'ಗಳನ್ನು 'ಅಪ್‌ಡೇಟ್ಸ್' ಎಂಬ ಹೊಸ ಟ್ಯಾಬ್ ಮೂಲಕ ಪರಿಚಯಿಸಲಾಗುತ್ತದೆ. ಪ್ರಸ್ತುತ ಈ ವೈಶಿಷ್ಟ್ಯವನ್ನು ಕೊಲಂಬಿಯಾ ಮತ್ತು ಸಿಂಗಾಪುರದಲ್ಲಿ ಪ್ರಾರಂಭಿಸಲಾಗುತ್ತಿದೆ. ಶೀಘ್ರದಲ್ಲೇ ಇದು ಭಾರ ಸೇರದಿಂತೆ ಹಲವು ದೇಶದ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.
ಒನ್ ಟು ಮೆನಿ ಕಾನ್ಸೆಪ್ಟ್ ನೊಂದಿಗೆ ವಾಟ್ಸ್ಆಪ್ ಈ ಚಾನೆಲ್ ಫೀಚರ್ ಕ್ರಿಯೇಟ್ ಮಾಡಿದೆ ಎನ್ನುತ್ತಾರೆ ಟೆಕ್ ತಜ್ಞರು. ಅದರಲ್ಲೂ ಬಳಕೆದಾರರು ತಮಗೆ ಇಷ್ಟವಾದ ಚಾನೆಲ್ಗಳನ್ನು ಆಯ್ಕೆ ಮಾಡಿ ಅಪ್ಡೇಟ್ಗಳನ್ನು ಪಡೆದುಕೊಳ್ಳಬಹುದಾಗಿದೆಯಂತೆ. ಈ ಚಾನಲ್‌ಗಳ ವೈಶಿಷ್ಟ್ಯದಲ್ಲಿ WhatsApp ಗೌಪ್ಯತೆ ಬಗ್ಗೆಯೂ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದು ಕಂಪನಿ ಹೇಳುತ್ತದೆ.