ನವದೆಹಲಿ: ಹೊಸ ಐಟಿ ನಿಯಮಗಳು 2021 ಕ್ಕೆ ಅನುಗುಣವಾಗಿ ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ಜುಲೈ ತಿಂಗಳಲ್ಲಿ ಭಾರತದಲ್ಲಿ 72 ಲಕ್ಷಕ್ಕೂ ಹೆಚ್ಚು ದುರುದ್ದೇಶಪೂರಿತ ಖಾತೆಗಳನ್ನು ನಿಷೇಧಿಸಿದೆ. "ಜುಲೈ 1 ರಿಂದ 31ರ ನಡುವೆ 72,28,000 ವಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಇವುಗಳ ಪೈಕಿ 31,08,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ" ಎಂದು ವಾಟ್ಸ್ಆ್ಯಪ್ ತನ್ನ ಮಾಸಿಕ ಅನುಸರಣಾ ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸ್ಆ್ಯಪ್ ಜುಲೈನಲ್ಲಿ ಮತ್ತೊಂದು ದಾಖಲೆಯ 11,067 ದೂರು ವರದಿಗಳನ್ನು ಸ್ವೀಕರಿಸಿದೆ ಮತ್ತು ಇವುಗಳ ಪೈಕಿ 72ರಲ್ಲಿ ಕ್ರಮ ಕೈಗೊಳ್ಳಲಾಗಿದೆ. "ಅಕೌಂಟ್ಸ್ ಆಕ್ಷನ್ಡ್" ಎಂಬುದು ವರದಿಯ ಆಧಾರದ ಮೇಲೆ ವಾಟ್ಸ್ಆ್ಯಪ್ ಕ್ರಮಗಳನ್ನು ತೆಗೆದುಕೊಂಡ ವರದಿಗಳನ್ನು ಸೂಚಿಸುತ್ತದೆ ಮತ್ತು ಕ್ರಮ ತೆಗೆದುಕೊಳ್ಳುವುದು ಖಾತೆಯನ್ನು ನಿಷೇಧಿಸುವುದನ್ನು ಅಥವಾ ಈ ಹಿಂದೆ ನಿಷೇಧಿಸಲಾದ ಖಾತೆಯನ್ನು ಪುನಃಸ್ಥಾಪಿಸುವುದನ್ನು ಸೂಚಿಸುತ್ತದೆ.
"ಈ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರಿಂದ ಬಂದ ದೂರುಗಳು ಮತ್ತು ಅದರ ಮೇಲೆ ವಾಟ್ಸ್ಆ್ಯಪ್ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒಳಗೊಂಡಿದೆ, ಜೊತೆಗೆ ನಮ್ಮ ಪ್ಲಾಟ್ಫಾರ್ಮ್ನ ದುರುಪಯೋಗವನ್ನು ತಡೆಗಟ್ಟಲು ಆಂತರಿಕ ನಿರ್ಬಂಧ ಕ್ರಮಗಳನ್ನು ಒಳಗೊಂಡಿದೆ" ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ಜುಲೈ 1 ಮತ್ತು ಜುಲೈ 31 ರ ನಡುವೆ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ 5 ಆದೇಶಗಳು ಬಂದಿದ್ದು, ಈ ಎಲ್ಲ ಆದೇಶಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಉಲ್ಲೇಖಿಸಿದೆ.