ನವದೆಹಲಿ: ಹೊಸ ಐಟಿ ನಿಯಮಗಳು 2021ರ ಅನುಸಾರವಾಗಿ ಮೆಟಾ ಒಡೆತನದ ವಾಟ್ಸ್ಆ್ಯಪ್ ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ 45 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ಎಂದು ಕಂಪನಿ ಶನಿವಾರ ತಿಳಿಸಿದೆ. "ಫೆ.1 ರಿಂದ 28 ರ ನಡುವೆ 4,597,400 ವಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಈ ಖಾತೆಗಳಲ್ಲಿ 1,298,000 ಬಳಕೆದಾರರಿಂದ ಯಾವುದೇ ಪ್ರತಿಕ್ರಿಯೆ ಬರುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ" ಎಂದು ವಾಟ್ಸ್ಆ್ಯಪ್ ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ಮಾಹಿತಿ ನೀಡಿದೆ.
"ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್. ಫೆಬ್ರವರಿಯಲ್ಲಿ ದೇಶದಲ್ಲಿ ದಾಖಲೆಯ 2,804 ದೂರುಗಳನ್ನು ಸ್ವೀಕರಿಸಿದೆ. ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸ್ಆ್ಯಪ್ ತೆಗೆದುಕೊಂಡ ಅನುಗುಣವಾದ ಕ್ರಮಗಳನ್ನು ಒಳಗೊಂಡಿದೆ. ಜತೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ. ನಾವು ಪಾರದರ್ಶಕತೆಯೊಂದಿಗೆ ನಮ್ಮ ಕೆಲಸ ಮುಂದುವರಿಯುತ್ತೇವೆ ಮತ್ತು ಭವಿಷ್ಯದ ವರದಿಗಳಲ್ಲಿ ನಮ್ಮ ಪ್ರಯತ್ನಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ" ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಜಿಎಸಿ ರಚನೆ: ಈ ಮಧ್ಯೆ ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು (ಜಿಎಸಿ) ರಚಿಸಿದ್ದಾರೆ. ಅದು ವಿಷಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತದೆ.
ಹೊಸದಾಗಿ ರಚಿಸಲಾದ ಸಮಿತಿಯು ಬಿಗ್ ಟೆಕ್ ಕಂಪನಿಗಳನ್ನು ಪಳಗಿಸಲು ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನಿರ್ಧಾರಗಳ ವಿರುದ್ಧ ಬಳಕೆದಾರರ ಮನವಿಗಳನ್ನು ಪರಿಶೀಲಿಸುತ್ತದೆ. ಇತ್ತೀಚೆಗೆ ತಿದ್ದುಪಡಿ ಮಾಡಲಾದ ಐಟಿ ನಿಯಮಗಳು-2021ರ ಅಡಿಯಲ್ಲಿ ಅಗತ್ಯವಿರುವಂತೆ ಮೂರು ಜಿಎಸಿಗಳನ್ನು ಸ್ಥಾಪಿಸಲು ಐಟಿ ಸಚಿವಾಲಯ ಕಳೆದ ತಿಂಗಳು ಸೂಚನೆ ನೀಡಿದೆ. ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವದ ಇಂಟರ್‌ನೆಟ್‌ನತ್ತ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು 'ಡಿಜಿಟಲ್ ನಾಗ್ರಿಕ್ಸ್' ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕೆಲವು ತಿದ್ದುಪಡಿಗಳನ್ನು ಹೊಂದಿದೆ.