ನವದೆಹಲಿ: ಮುಖೇಶ್ ಅಂಬಾನಿ ಈಗಾಗಲೇ ಕಡಿಮೆ ಬೆಲೆಯ ಸಾಧನಗಳು ಮತ್ತು ಇಂಟರ್ನೆಟ್ ನೀಡುವ ಮೂಲಕ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ್ದಾರೆ. ಈಗ ಮತ್ತೊಂದು ಕ್ರಾಂತಿಗೆ ಅವರು ಮುಂದಾಗಿದ್ದು, 15 ಸಾವಿರ ರೂಪಾಯಿಗಳಲ್ಲಿ ದೇಶದ ಜನರಿಗೆ ಲ್ಯಾಪ್ಟಾಪ್ ನೀಡಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ಮೂಲಕ 70 ಸಾವಿರ ಕೋಟಿ ರೂ. ಮೌಲ್ಯದ ಮಾರುಕಟ್ಟೆ ಮೇಲೆ ಅವರು ಕಣ್ಣಿಟ್ಟಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಶೀಘ್ರದಲ್ಲೇ 15,000 ರೂ.ಗಳ ಲ್ಯಾಪ್ಟಾಪ್ ತಯಾರಿಸಲು ಯೋಜಿಸುತ್ತಿದೆ. ಅಂದರೆ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಲ್ಯಾಪ್ಟಾಪ್ ಸಿಗಲಿದೆ. ಮುಂಬರುವ ತಿಂಗಳುಗಳಲ್ಲಿ ಲ್ಯಾಪ್ಟಾಪ್ ಬಿಡುಗಡೆ ಮಾಡಲು ಕಂಪನಿ ಈಗಾಗಲೇ ಲ್ಯಾಪ್ ಟಾಪ್ ತಯಾರಕರಾದ ಎಚ್ ಪಿ, ಏಸರ್, ಲೆನೊವೊ ಮತ್ತು ಇತರರೊಂದಿಗೆ ಮಾತುಕತೆ ನಡೆಸುತ್ತಿದೆ. ವರದಿಯ ಪ್ರಕಾರ, ಜಿಯೋ ಲ್ಯಾಪ್ಟಾಪ್ ಕ್ಲೌಡ್ ಲ್ಯಾಪ್ಟಾಪ್ ಆಗಿದ್ದು, ಇದು 'ಕ್ಲೌಡ್' ನಿಂದಲೇ ನಿಯಂತ್ರಿಸಲ್ಪಡುತ್ತದೆ. ಹೀಗಾಗಿ ಲ್ಯಾಪ್ಟಾಪ್ ಸಾಧನವು ಕೇವಲ ಒಂದು ಟರ್ಮಿನಲ್ ಆಗಿರುತ್ತದೆ.
ಇದರರ್ಥ ಲ್ಯಾಪ್ಟಾಪ್ನ ಪ್ರೊಸೆಸಿಂಗ್ ಮತ್ತು ಸ್ಟೋರೇಜ್ ರಿಲಯನ್ಸ್ ಜಿಯೋದ ಕ್ಲೌಡ್ ಕಂಪ್ಯೂಟಿಂಗ್ ಸೇವೆಯಾದ ಜಿಯೋ ಕ್ಲೌಡ್ನಲ್ಲಿ ನಡೆಯಲಿದೆ. ಇದರಿಂದ ಬಳಕೆದಾರು ಕಡಿಮೆ ವೆಚ್ಚದಲ್ಲಿ ಲ್ಯಾಪ್ಟಾಪ್ ಪಡೆಯಲು ಸಾಧ್ಯವಾಗಲಿದೆ. ಮೊದಲ ಬಾರಿಗೆ ಲ್ಯಾಪ್ಟಾಪ್ ಬಳಸಬಯಸುವವರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕಡಿಮೆ ಖರ್ಚಿನಲ್ಲಿ ಲ್ಯಾಪ್ಟಾಪ್ ನೀಡಬಹುದಾಗಿದೆ. ಜಿಯೋ ಕ್ಲೌಡ್ ಚಂದಾದಾರಿಕೆ ವಿಧಾನದಲ್ಲಿ ಲಭ್ಯವಾಗಲಿದೆ ಮತ್ತು ಒಂದೇ ಲ್ಯಾಪ್ಟಾಪ್ನಲ್ಲಿ ಅನೇಕ ಸಬ್ಸ್ಕ್ರಿಪ್ಷನ್ಗಳನ್ನು ಬಳಸಬಹುದು. ವರದಿಯ ಪ್ರಕಾರ, ಕಂಪನಿಯು ಈಗಾಗಲೇ ಎಚ್ಪಿ ಕ್ರೋಮ್ಬುಕ್ನಲ್ಲಿ ಪ್ರಯೋಗಗಳನ್ನು ನಡೆಸಲು ಪ್ರಾರಂಭಿಸಿದೆ.
ಹೊಸ ಲ್ಯಾಪ್ಟಾಪ್ ಬಗ್ಗೆ ಜಿಯೋ ಇನ್ನೂ ಯಾವುದೇ ವಿವರಗಳನ್ನು ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಜಿಯೋಬುಕ್ ಬಿಡುಗಡೆಯೊಂದಿಗೆ ಈ ಲ್ಯಾಪ್ಟಾಪ್ ಘೋಷಣೆಯಾಗಬಹುದು. 16,499 ರೂಪಾಯಿ ಬೆಲೆಯ ರಿಲಯನ್ಸ್ ಜಿಯೋಬುಕ್ ಜಿಯೋಓಎಸ್ ನಲ್ಲಿ ರನ್ ಆಗುತ್ತದೆ. ಇದು 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ನೊಂದಿಗೆ ಮೀಡಿಯಾಟೆಕ್ ಚಿಪ್ ಸೆಟ್ ನಿಂದ ನಿಯಂತ್ರಿಸಲ್ಪಡುತ್ತದೆ ಹಾಗೂ ಇದನ್ನು ವಿಸ್ತರಿಸಬಹುದು. ಕಂಪನಿಯು ಲ್ಯಾಪ್ಟಾಪ್ ಜೊತೆಗೆ ಖರೀದಿದಾರರಿಗೆ 100 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಸಹ ದೊರೆಯಲಿದೆ.
ಇದನ್ನೂ ಓದಿ :Google Photos ಬಳಸಿ ಸ್ಲೈಡ್ ಶೋ ರಚಿಸುವುದು ಹೇಗೆ? ಇಲ್ಲಿದೆ ಮಾಹಿತಿ