ಕೋಲ್ಕತ್ತಾ :ಇಲ್ಲಿಂದ 50 ಕಿ.ಮೀ ದೂರದಲ್ಲಿರುವ ಗ್ರಾಮೀಣ ಉಪ-ವಿಭಾಗೀಯ ಆಸ್ಪತ್ರೆ ಮತ್ತು ಡೈಮಂಡ್ ಹಾರ್ಬರ್ ವೈದ್ಯಕೀಯ ಕಾಲೇಜು ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ಮಾಡಿದ್ದಾರೆ. ಇವರು ಕೃತಕ ಸಂತಾನೋತ್ಪತ್ತಿ ಅಂಗಗಳನ್ನು ರಚಿಸಿ ಈ ಮೂಲಕ ಬಾಂಗ್ಲಾದೇಶದ ಮಹಿಳೆಗೆ ಹೊಸ ಜೀವನ ನೀಡಿದ್ದಾರೆ. ಇದರಿಂದ ಆ ಮಹಿಳೆ ಇತರ ಮಹಿಳೆಯರಂತೆ ಲೈಂಗಿಕತೆಯಲ್ಲಿ ತೊಡಗಲು ಸಾಧ್ಯವಾಗುತ್ತದೆ.
ಚಿಕಿತ್ಸೆ ಪಡೆದ ಮಹಿಳೆಗೆ ಹುಟ್ಟಿದಾಗಿನಿಂದಲೂ ಯೋನಿ ಮತ್ತು ಗರ್ಭಾಶಯ ಇರಲಿಲ್ಲ. ಅವರು ಆರೋಗ್ಯಕರ ಮತ್ತು ಸಾಮಾನ್ಯ ಜೀವನವನ್ನು ನಡೆಸಲು ಅನುಕೂಲವಾಗುವಂತೆ ಅವುಗಳನ್ನು ರಚಿಸಲು ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಕಳೆದ ಒಂದು ವರ್ಷದಲ್ಲಿ ಆಸ್ಪತ್ರೆಯಲ್ಲಿ ನಡೆದ ನಾಲ್ಕನೇ ಶಸ್ತ್ರಚಿಕಿತ್ಸೆ ಇದಾಗಿದೆ. ಕೆಲವು ದಿನಗಳ ಹಿಂದೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದರೂ, ಬುಧವಾರ ಆಸ್ಪತ್ರೆಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ನಾವು ಈ ಮಾಹಿತಿಯನ್ನು ರಹಸ್ಯವಾಗಿಟ್ಟಿದ್ದೇವೆ. ಏಕೆಂದರೆ, ನಾವು ಮಹಿಳೆಯ ಗುರುತನ್ನು ಬಹಿರಂಗಪಡಿಸದಿರಲು ಬಯಸಿದ್ದೇವೆ. ಮಹಿಳೆ ಮಂಗಳವಾರ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಮತ್ತು ಈಗ ನಾವು ಮಾಹಿತಿಯನ್ನು ಹಂಚಿಕೊಳ್ಳಬಹುದೆಂದು ನಾವು ಭಾವಿಸಿದ್ದೇವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಹದಿನೈದು ದಿನಗಳ ಹಿಂದೆ 21 ವರ್ಷದ ಬಾಂಗ್ಲಾದೇಶದ ಮಹಿಳೆ ಹೊರರೋಗಿ ವಿಭಾಗಕ್ಕೆ ಬಂದಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.