ವಾಷಿಂಗ್ಟನ್: ಬ್ರಹ್ಮಾಂಡದ ಬಗೆಗಿನ ನಮ್ಮ ಜ್ಞಾನದ ವ್ಯಾಪ್ತಿ ಈಗ ಮತ್ತಷ್ಟು ವಿಸ್ತಾರಗೊಳ್ಳಲಿದೆ. ನಿನ್ನೆ ಅಮೆರಿಕದ ಬಾಹ್ಯಾಕಾಶ ಕೇಂದ್ರ (ನಾಸಾ), ಅತ್ಯಾಧುನಿಕ ಟೆಲಿಸ್ಕೋಪ್(ದೂರದರ್ಶಕ) ಜೇಮ್ಸ್ ವೆಬ್ ಇದೇ ಮೊದಲ ಬಾರಿಗೆ ಕಳುಹಿಸಿದ ಬ್ರಹ್ಮಾಂಡದ ಅಪರೂಪದ ಫೋಟೋವೊಂದನ್ನು ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಕಾಣುವ ನಕ್ಷತ್ರ ಪುಂಜಗಳು (ಗ್ಯಾಲಕ್ಸಿಗಳು) ನಮಗೆ ಬಾಹ್ಯಾಕಾಶ ವಿಜ್ಞಾನದ ಕುರಿತಾಗಿ ಮತ್ತಷ್ಟು ಆಳವಾದ ವಿವರ ನೀಡುತ್ತವೆ. ಬಿಗ್‌ಬ್ಯಾಂಗ್ ನಂತರ ರೂಪುಗೊಂಡ ಆರಂಭಿಕ ನಕ್ಷತ್ರಪುಂಜಗಳ ಮೊಟ್ಟ ಮೊದಲ ಚಿತ್ರ ಇದಾಗಿದೆ. ಇಲ್ಲಿಯವರೆಗಿನ ಬ್ರಹ್ಮಾಂಡದ ಅತ್ಯಂತ ದೂರದ ಮತ್ತು ಅಷ್ಟೇ ತೀಕ್ಷ್ಣವಾದ ನಸುಗೆಂಪು(Infrared) ಚಿತ್ರವಿದು.
ನಿನ್ನೆ ಈ ಫೋಟೋವನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದಲ್ಲಿ ಜೋ ಬೈಡನ್ ಬಿಡುಗಡೆ ಮಾಡಿ, ಇದನ್ನು ಐತಿಹಾಸಿಕ ಎಂದು ಬಣ್ಣಿಸಿದರು. ಫೋಟೋದಲ್ಲಿ ಸುತ್ತಲೂ ನಕ್ಷತ್ರಗಳು, ನಕ್ಷತ್ರಪುಂಜಗಳು ಆವರಿಸಿರುವುದನ್ನು ಕಾಣಬಹುದು. ಅಂದಹಾಗೆ, 13.8 ಬಿಲಿಯನ್ ವರ್ಷಗಳ ಹಿಂದೆ ಬಿಗ್ ಬ್ಯಾಂಗ್ ಸಂಭವಿಸಿ ವಿಶ್ವ ಉದಯಿಸಿದೆ ಎಂಬ ವೈಜ್ಞಾನಿಕ ನಂಬುಗೆಯ ಬಳಿಕ ವಿಶ್ವದ ಉದಯವನ್ನು ಮತ್ತಷ್ಟು ಬಗೆದು ನೋಡುವ ವಿಜ್ಞಾನಿಗಳ ಪ್ರಯತ್ನವೀಗ ಫಲ ನೀಡುತ್ತಿದೆ.
ಈ ಫೋಟೋ ಬಿಡುಗಡೆಗೊಳಿಸಿ ಅಚ್ಚರಿಯಿಂದ ಮಾತನಾಡಿದ ಜೋ ಬೈಡನ್, "ಈ ದೂರದರ್ಶಕವು ಮಾನವಕುಲದ ಶ್ರೇಷ್ಠ ಸಾಧನೆಗಳಲ್ಲಿ ಒಂದು. ಸುಮಾರು 13 ಬಿಲಿಯನ್ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಈ ವಿಶ್ವದ ಅತ್ಯಂತ ಹಳೆಯ ಬೆಳಕು ಇದು" ಎಂದು ಬಣ್ಣಿಸಿದರು.
1. ಮೊದಲ ಪೂರ್ಣ ಬಣ್ಣದ ಚಿತ್ರ: ಚಿತ್ರದಲ್ಲಿ SMACS 0723 ಎಂಬ ನಕ್ಷತ್ರ ಪುಂಜವು ಬಿಗ್ ಬ್ಯಾಂಗ್ ಸ್ಫೋಟದ ಬಳಿಕ ಉದ್ಭವಿಸಿದ ಬ್ರಹ್ಮಾಂಡ (ಅಂದರೆ 4.6 ಬಿಲಿಯನ್ ವರ್ಷಗಳ ಹಿಂದೆ) ಕಂಡ ರೀತಿಯನ್ನು ತೋರಿಸುತ್ತದೆ. ಈ ಎಲ್ಲ ನಕ್ಷತ್ರ ಪುಂಜಗಳು ಗುರುತ್ವಾಕರ್ಷಣ ಮಸೂರದಂತೆ ಕಾರ್ಯನಿರ್ವಹಿಸುತ್ತವೆ. ಇವು ಅತ್ಯಂತ ದೂರದಲ್ಲಿರುವ ನಕ್ಷತ್ರ ಪುಂಜಗಳು ಸ್ವಾಭಾವಿಕವಾಗಿರುವುದಕ್ಕಿಂತ ಹೆಚ್ಚು ಗಾತ್ರದಲ್ಲಿರುವಂತೆ ತೋಚುತ್ತಿವೆ. ಇಂಥ ಬಹುದೂರದಲ್ಲಿರುವ ನಕ್ಷತ್ರ ಪುಂಜಗಳನ್ನು ಅತ್ಯಾಧುನಿಕ ಜೇಮ್ಸ್ ವೆಬ್ ಟೆಲಿಸ್ಕೋಪ್‌ನಲ್ಲಿ ಅಳವಡಿಸಿರುವ NIRCam(ನಿಯರ್ ಇನ್ಫ್ರಾರೆಡ್ ಕ್ಯಾಮರಾ)ವು ಸೆರೆಹಿಡಿದು ಅತ್ಯಂತ ಸಮೀಪದಲ್ಲಿ ಗೋಚರವಾಗುವಂತೆ ನಮ್ಮ ಕಣ್ಣ ಮುಂದೆ ತೆರೆದಿಟ್ಟಿದೆ.
2. ಏನಿದು ಜೇಮ್ಸ್ ವೆಬ್ ಟೆಲಿಸ್ಕೋಪ್?:ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಸುಮಾರು 10 ಬಿಲಿಯನ್ ಡಾಲರ್ ವ್ಯಯಿಸಿ ಅಭಿವೃದ್ಧಿಪಡಿಸಿದ ಬಾಹ್ಯಾಕಾಶ ಸಾಧನವೇ ಜೇಮ್ಸ್ ವೆಬ್ ಟೆಲಿಸ್ಕೋಪ್. ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ನಿಂತು ಅಂತರಿಕ್ಷದ ಚಿತ್ರಗಳನ್ನು ಸೆರೆಹಿಡಿಯುವುದು ಇದರ ಕೆಲಸ. ಈ ಹಿಂದೆ ಇದ್ದ ಹಬಲ್‌ಗಿಂತ 400 ಪಟ್ಟು ಸೂಕ್ಷ್ಮವಾಗಿ ಅತಿನೇರಳೆ ಕಿರಣಗಳನ್ನು ಗ್ರಹಿಸುವಷ್ಟು ಸಾಮರ್ಥ್ಯ ಇದಕ್ಕಿದೆ. 2018ರಲ್ಲಿ ಈ ಟೆಲಿಸ್ಕೋಪ್ ರೂಪಿಸುವ ಕೆಲಸ ಆರಂಭವಾಗಿ 2021ರಲ್ಲಿ ಪೂರ್ಣಗೊಂಡಿತು. ಅತಿನೇರಳೆ ಕಿರಣಗಳಿಂದ ಸಂಗ್ರಹಿಸುವ ಮಾಹಿತಿ ಸ್ಪೆಕ್ಟೊಗ್ರಾಫ್ ಮೂಲಕ ಫೋಟೋದಲ್ಲಿ ಹೀಗೆ ಗೋಚರವಾಗುತ್ತದೆ. ವಿಶ್ವ ರೂಪುಗೊಂಡ ಬಗೆ ಮತ್ತು ಸಮಯದ ಆರಂಭವನ್ನೇ ಕಂಡು ಹಿಡಿಯುವಲ್ಲಿ ಮಾನವತೆ ಕಾಣುತ್ತಿರುವ ಅತ್ಯಂತ ಅಪರೂಪದ ವಿಶಿಷ್ಟ ವೈಜ್ಞಾನಿಕ ಪ್ರಯತ್ನದ ಭಾಗವಿದು.
3. ಹೇಗೆ ಕೆಲಸ ಮಾಡುತ್ತದೆ?:21 ಅಡಿ ಸುತ್ತಳತೆ, ಷಟ್ಕೋನಾಕಾರದ ಹದಿನೆಂಟು ಫಲಕಗಳನ್ನು ಒಳಗೊಂಡಿರುವ ಈ ಟೆಲಿಸ್ಕೋಪ್, ಸೂರ್ಯನ ಕಿರಣಗಳು ತನಗೆ ನೇರವಾಗಿ ಬೀಳದಂತೆ ಭೂಮಿಯ ನೆರಳಿನಲ್ಲಿರುತ್ತದೆ. ಭೂಮಿಯು ಸೂರ್ಯನನ್ನು ಸುತ್ತುವಾಗ ಸುರಕ್ಷಿತ ಅಂತರದಲ್ಲಿ ಈ ದೂರದರ್ಶಕವೂ ಸುತ್ತುತ್ತಿರುತ್ತದೆ. -386 ಡಿಗ್ರಿ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುವ ದೂರದರ್ಶಕ, ಅಂತರಿಕ್ಷದಲ್ಲಿ ಹೊಮ್ಮುವ ಅತಿನೇರಳೆ ಕಿರಣಗಳನ್ನು ಗ್ರಹಿಸಿ, ಪರಿವೀಕ್ಷಿಸುತ್ತದೆ. ಸ್ಪೆಕ್ಟೋಗ್ರಾಫ್ ಮೂಲಕ ವಿವಿಧ ಬಣ್ಣಗಳನ್ನಾಗಿ ವಿಭಾಗಿಸುತ್ತದೆ. ಈ ಮೂಲಕ ಸಿಗುವ ಚಿತ್ರಗಳನ್ನು ನಾಸಾಕ್ಕೆ ರವಾನಿಸುತ್ತದೆ.