ಬೆಂಗಳೂರು :ಚಂದ್ರಯಾನ-3 ಯೋಜನೆ ಸಕ್ಸಸ್ ಕಂಡು ವಿಕ್ರಮ್ ಲ್ಯಾಂಡರ್ ಚಂದ್ರಸ್ಪರ್ಶವಾಗಿದೆ. ಭಾರತ ಚಂದ್ರನ ಮೇಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್ ಇಂದು ಸಂಜೆ (ಬುಧವಾರ) ಘೋಷಿಸಿದರು.
ಚಂದ್ರಯಾನ-3 ಯೋಜನೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಎಲ್ಲರಿಗೂ ಧನ್ಯವಾದ ತಿಳಿಸಿ ಮಾತನಾಡಿದ ಅವರು, ಇನ್ನು ನಾವು ಚಂದ್ರನ ಊರಿನ ಪಯಣಿಗರು. ಶಶಿಯ ಮೇಲೆ ನಮ್ಮ ನೌಕೆ ನಿಂತಿದೆ. ನಾಲ್ಕು ವರ್ಷಗಳ ಶ್ರಮ ಇಂದು ಪ್ರತಿಫಲ ಕಂಡಿತು. ಇದರ ಹಿಂದೆ ಅವಿರತವಾಗಿ ಶ್ರಮಿಸಿದ ಎಲ್ಲ ವಿಜ್ಞಾನಿಗಳಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳು ಎಂದು ಹೇಳಿದರು.
ಚಂದ್ರನ ಮೇಲೆ ಲ್ಯಾಂಡರ್ ಇಳಿದ ಬಳಿಕ ಸಹೋದ್ಯೋಗಿಗಳೊಂದಿಗೆ ಸಂಭ್ರಮಾಚರಣೆ ಮಾಡಿದ ಸೋಮನಾಥನ್, ಹರ್ಷ ವ್ಯಕ್ತಪಡಿಸಿದರು. ಲ್ಯಾಂಡರ್ ಇಳಿದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳೇ ನಾವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ್ದೇವೆ. ಭಾರತವು ಚಂದ್ರನ ಮೇಲಿದೆ ಎಂದು ಹೇಳಿದರು. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ, ದಕ್ಷಿಣ ಆಫ್ರಿಕಾದಿಂದ ಚಂದ್ರಯಾನ-3 ರ ಯಶಸ್ಸನ್ನು ವಿಡಿಯೋ ಕಾನ್ಫ್ರೆನ್ಸ್ ಮೂಲಕ ವೀಕ್ಷಿಸಿದರು.
ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಜಮಾಯಿಸಿದ್ದ ವಿಜ್ಞಾನಿಗಳು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದಲೇ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶವಾಸಿಗಳೊಂದಿಗೆ ಸಂಭ್ರಮಿಸಿದರು.