ಹೈದರಾಬಾದ್: ವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿಯಂಥ ಸುಧಾರಿತ ತಂತ್ರಜ್ಞಾನಗಳು ಹೊಸ ಕ್ರಾಂತಿಯೊಂದನ್ನು ಸೃಷ್ಟಿಸುತ್ತಿದೆ. ಈ ತಂತ್ರಜ್ಞಾನಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಂಡು ಅವುಗಳನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಜೋಗುಳಂಬ ಗದ್ವಾಲ ಜಿಲ್ಲೆಯ ಜೀವಶಾಸ್ತ್ರ ಶಿಕ್ಷಕರೊಬ್ಬರು ಇದೇ ಮಾದರಿಯಲ್ಲಿ ಯೋಚಿಸಿ ಕಾರ್ಯೋನ್ಮುಖರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಪಠ್ಯಕ್ರಮದ ಬೋಧನೆಗೆ ಹೊಸ ತಂತ್ರಜ್ಞಾನಗಳನ್ನು ಇವರು ಸೇರಿಸುತ್ತಿದ್ದಾರೆ.
ರವಿಶಂಕರ್ ಅವರು ಜೋಗುಳಂಬ ಗದ್ವಾಲ ಜಿಲ್ಲೆಯ ಉಂಡವಳ್ಳಿ ಮಂಡಲದ ಪುಲ್ಲೂರು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಜೀವಶಾಸ್ತ್ರ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಠ್ಯಕ್ರಮಕ್ಕೆ ವಿಜ್ಞಾನ ತಂತ್ರಜ್ಞಾನವನ್ನು ಸೇರಿಸುವ ಮೂಲಕ, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥಮಾಡಿಕೊಳ್ಳಲು ವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ ವಿಜ್ಞಾನ ಪಾಠಗಳನ್ನು ಕಲಿಸುತ್ತಿದ್ದಾರೆ.
ವರ್ಚುಯಲ್ ರಿಯಾಲಿಟಿನಲ್ಲಿ ಹೆಡ್‌ಸೆಟ್ ಬಳಸಿ ಜೀವಶಾಸ್ತ್ರಕ್ಕೆ ಸಂಬಂಧಿಸಿದ ವಿಆರ್ ವಿಡಿಯೋಗಳನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳ ಸಂಶಯಗಳನ್ನು ನಿವಾರಣೆ ಮಾಡಲಾಗುತ್ತಿದೆ. ಕಳೆದ ವರ್ಷದಿಂದ ಟ್ಯೂಟರ್ ಆ್ಯಪ್ ಬಳಸಿ, ಈ ತಂತ್ರಜ್ಞಾನದೊಂದಿಗೆ ಡಿಜಿಟಲ್ ಪರದೆಯ ಮೂಲಕ ಪಾಠಗಳನ್ನು ಕಲಿಸಲಾಗುತ್ತಿದೆ.
ತೆಲುಗು ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ: ರವಿಶಂಕರ್ ಅವರಿಗೆ ಬೋಧನೆಯಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ತಂತ್ರಜ್ಞಾನದ ಬಳಕೆ ಮಾಡುವುದು ಹೊಸ ವಿಷಯವೇನಲ್ಲ. 2019 ರಿಂದ, ಅವರು ಬೋಧನೆಯಲ್ಲಿ ವಿಶೇಷತೆ ತೋರಿಸುತ್ತಿದ್ದಾರೆ. 2020 ರಲ್ಲಿ ಬಯಾಲಜಿ ಆಲ್ಫಾಬೆಟ್ ಅನ್ನು ರಚಿಸಿದ್ದರು. 2021 ರಲ್ಲಿ, ಜೈವಿಕ ಸಂಖ್ಯಾತ್ಮಕ ಕ್ಯಾಲೆಂಡರ್ ಅನ್ನು ಸಿದ್ಧಪಡಿಸಿದ್ದರು. ಇದು ತೆಲುಗು ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಳಿಸಿದೆ. ಅಂದಿನಿಂದ ಪ್ರತಿ ವರ್ಷ ಜೈವಿಕ ಸಂಖ್ಯಾತ್ಮಕ ಕ್ಯಾಲೆಂಡರ್ ಅನ್ನು ಇವರು ಸಿದ್ಧಪಡಿಸುತ್ತಿದ್ದಾರೆ.