ನವದೆಹಲಿ:ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ ವಿಕ್ರಮ್‌ನಲ್ಲಿನ ಇನ್‌ಸ್ಟ್ರುಮೆಂಟ್ ಆಫ್ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ಐಎಲ್‌ಎಸ್‌ಎ) ಪೇಲೋಡ್ ಆಗಸ್ಟ್ 26 ರಂದು ಚಂದ್ರನ ಮೇಲ್ಮೈಯಲ್ಲಿ ಸಂಭವಿಸಿದ ನೈಸರ್ಗಿಕ ಘಟನೆಯನ್ನು ದಾಖಲಿಸಿದೆ. ಈ ಘಟನೆಯ ಮೂಲ ಅರಿತುಕೊಳ್ಳಲು ತನಿಖೆ ಮಾಡಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಹೇಳಿದೆ.
"ಚಂದ್ರಯಾನ 3ರ ಲ್ಯಾಂಡರ್‌ನಲ್ಲಿನ ಇನ್ಸ್ಟ್ರುಮೆಂಟ್ ಫಾರ್ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ILSA) ಪೇಲೋಡ್ ಚಂದ್ರನ ಮೇಲೆ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ತಂತ್ರಜ್ಞಾನ - ಆಧಾರಿತ ಉಪಕರಣದ ಮೊದಲ ನಿದರ್ಶನ ಇದಾಗಿದೆ. ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಲಾದ ಐಎಲ್‌ಎಸ್‌ಎ ಪೇಲೋಡ್ ಚಂದ್ರನ ಮೇಲ್ಮೈಯಲ್ಲಿ ಭೂಕಂಪಗಳ ನೈಸರ್ಗಿಕ ವಿದ್ಯಮಾನವನ್ನು ದಾಖಲಿಸಿದೆ. ಆಗಸ್ಟ್ 26 ರಂದು ಈ ಭೂಕಂಪ ಸಂಭವಿಸಿದೆ. ಭೂಕಂಪದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇಸ್ರೋ ತಿಳಿಸಿದೆ.
ಐಎಲ್‌ಎಸ್‌ಎನಿಂದ ಭೂಕಂಪನ ಮಾಹಿತಿ ದಾಖಲು:ಸಾಮಾಜಿಕ ಮಾಧ್ಯಮವಾದ ಎಕ್ಸ್ನಲ್ಲಿ ಪೋಸ್ಟ್‌ನಲ್ಲಿ ಇಸ್ರೋ ಸಂಸ್ಥೆಯು, ಚಂದ್ರಯಾನ-3 ಲ್ಯಾಂಡರ್‌ನಲ್ಲಿನ ILSA ಪೇಲೋಡ್ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ತಂತ್ರಜ್ಞಾನವನ್ನು ಆಧರಿಸಿದೆ. ಇಂತಹ ಉಪಕರಣವನ್ನು ಚಂದ್ರನ ಮೇಲ್ಮೈಗೆ ಕಳುಹಿಸಿರುವುದು ಇದೇ ಮೊದಲು. ಈ ಉಪಕರಣವು ರೋವರ್ ಮತ್ತು ಇತರ ಪೇಲೋಡ್‌ಗಳ ಚಲನೆಯಿಂದ ಚಂದ್ರನ ಮೇಲಿನ ಕಂಪನಗಳ ದತ್ತಾಂಶಗಳನ್ನು ದಾಖಲಿಸಿದೆ.
ಐಎಲ್ಎಸ್ಎಯು ಆರು ಉನ್ನತ-ಸೂಕ್ಷ್ಮತೆಯ ವೇಗವರ್ಧಕಗಳ ಸಮೂಹವನ್ನು ಒಳಗೊಂಡಿದೆ. ಇವುಗಳನ್ನು ಸಿಲಿಕಾನ್ ಮೈಕ್ರೋಮ್ಯಾಚಿನಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ಸ್ಥಳೀಯವಾಗಿ ತಯಾರಿಸಲಾಗಿದೆ. ಕೋರ್ ಸೆನ್ಸಿಂಗ್ ಅಂಶವು ರಚನಾತ್ಮಕ ವಿದ್ಯುದ್ವಾರಗಳೊಂದಿಗೆ ಸ್ಪ್ರಿಂಗ್- ಮಾಸ್ ಸಿಸ್ಟಮ್ ಅನ್ನು ಒಳಗೊಂಡಿದೆ. ಬಾಹ್ಯ ಕಂಪನಗಳು ವಿಚಲನಕ್ಕೆ ಕಾರಣವಾಗುತ್ತವೆ. ಇದರ ಪರಿಣಾಮವಾಗಿ ಬದಲಾವಣೆಯನ್ನು ವೋಲ್ಟೇಜ್ ಆಗಿ ಪರಿವರ್ತಿಸಲಾಗುತ್ತದೆ.