ಕರ್ನಾಟಕ

karnataka

ETV Bharat / science-and-technology

ಎತ್ತರ ಹೆಚ್ಚಿಸಿಕೊಂಡು ಮತ್ತೆ ಸಾಫ್ಟ್​ ಲ್ಯಾಂಡ್ ಆದ ವಿಕ್ರಮ್ ಲ್ಯಾಂಡರ್​; ಇಸ್ರೊದ ಮತ್ತೊಂದು ಮಹತ್ಸಾಧನೆ - ವಿಕ್ರಮ್ ಮತ್ತೆ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡ್

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್​ನ ಎಂಜಿನ್​ಗಳನ್ನು ಚಾಲನೆಗೊಳಿಸಿ ಅದನ್ನು ಯಶಸ್ವಿ ಹಾಪ್ ಪ್ರಯೋಗಕ್ಕೆ ಒಳಪಡಿಸಲಾಗಿದೆ ಎಂದು ಇಸ್ರೊ ತಿಳಿಸಿದೆ.

Vikram soft-landed on moon, again!
Vikram soft-landed on moon, again!

By ETV Bharat Karnataka Team

Published : Sep 4, 2023, 12:22 PM IST

ನವದೆಹಲಿ: ಚಂದ್ರನ ಮೇಲೆ ಅನ್ವೇಷಣೆ ನಡೆಸುತ್ತಿರುವ ವಿಕ್ರಮ್ ಲ್ಯಾಂಡರ್​ನ ಎಂಜಿನ್​ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಮ್ಮೆ ಚಾಲನೆಗೊಳಿಸಿದೆ. ಎಂಜಿನ್ ಚಾಲನೆಗೊಳಿಸಿ ಲ್ಯಾಂಡರ್​ನ ಎತ್ತರವನ್ನು ಸುಮಾರು 40 ಸೆಂ.ಮೀ ಹೆಚ್ಚಿಸಿ, 30 - 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯುವಂತೆ ಮಾಡಲಾಗಿದೆ ಎಂದು ಇಸ್ರೊ ಸೋಮವಾರ ತಿಳಿಸಿದೆ.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿರುವ ಇಸ್ರೊ, "ಚಂದ್ರಯಾನ -3 ಮಿಷನ್: ವಿಕ್ರಮ್ ಮತ್ತೆ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡ್ ಆಗಿದೆ!" ಎಂದು ಬರೆದಿದೆ. ವಿಕ್ರಮ್ ಲ್ಯಾಂಡರ್ ತನ್ನ ಉದ್ದೇಶಿತ ಮಿಷನ್ ಗುರಿಗಳಿಗಿಂತ ಹೆಚ್ಚಿದನ್ನು ಸಾಧಿಸಿದೆ. ಇದು ಯಶಸ್ವಿಯಾಗಿ ಹಾಪ್ ಪ್ರಯೋಗಕ್ಕೆ ಒಳಗಾಗಿದೆ. ಸೂಚನೆಗಳ ಮೇರೆಗೆ ಅದು ಎಂಜಿನ್​ಗಳನ್ನು ಚಾಲನೆಗೊಳಿಸಿದೆ, ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿತು ಮತ್ತು 30 - 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು." ಎಂದು ಇಸ್ರೊ ಹೇಳಿದೆ.

"ಪ್ರಾಮುಖ್ಯತೆ?: ಈ 'ಕಿಕ್-ಸ್ಟಾರ್ಟ್' ಭವಿಷ್ಯದಲ್ಲಿ ಅಲ್ಲಿಂದ ಮರಳುವ ವಿಧಾನ ಮತ್ತು ಮಾನವ ಕಾರ್ಯಾಚರಣೆಗಳನ್ನು ಉತ್ತೇಜಿಸುತ್ತದೆ!" ಎಂದು ಇಸ್ರೊ ಇದೇ ಟ್ವೀಟ್​​ನಲ್ಲಿ ಬರೆದಿದೆ. ಅಂದರೆ ಮುಂದಿನ ದಿನಗಳಲ್ಲಿ ಚಂದ್ರನಲ್ಲಿಗೆ ಹೋಗಿ ಅಲ್ಲಿಂದ ಮತ್ತೆ ಮರಳುವ ಯೋಜನೆಗಳಿಗೆ ಈ ಸಂಶೋಧನೆ ಮಹತ್ತರವಾಗಿದೆ ಎಂದು ಇಸ್ರೊ ಹೇಳಿದೆ.

"ಎಲ್ಲ ವ್ಯವಸ್ಥೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಆರೋಗ್ಯಕರವಾಗಿವೆ. ನಿಯೋಜಿಸಲಾದ ರ್ಯಾಂಪ್, ಚಾಸ್ಟೆ ಮತ್ತು ಐಎಲ್ಎಸ್ಎಗಳನ್ನು ಹಿಂದಕ್ಕೆ ಮಡಚಿ ಪ್ರಯೋಗದ ನಂತರ ಯಶಸ್ವಿಯಾಗಿ ಮರು ನಿಯೋಜಿಸಲಾಯಿತು." ಎಂದು ಇಸ್ರೊ ಟ್ವೀಟ್​​ನಲ್ಲಿ ತಿಳಿಸಿದೆ.

ವಿಕ್ರಮ್ ಲ್ಯಾಂಡರ್​​ನ ಹಾಪ್ ಪ್ರಯೋಗದ ಯಶಸ್ಸು ಭಾರತದ ಬಾಹ್ಯಾಕಾಶ ಪರಿಶೋಧನಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ದೇಶದ ತಾಂತ್ರಿಕ ಮುಂದುವರಿಕೆಯನ್ನು ಪ್ರದರ್ಶಿಸುವುದಲ್ಲದೆ ಭವಿಷ್ಯದಲ್ಲಿ ಹೆಚ್ಚು ಮಹತ್ವಾಕಾಂಕ್ಷೆಯ ಚಂದ್ರಯಾನಗಳಿಗೆ ದಾರಿ ಮಾಡಿಕೊಡುತ್ತದೆ. ವಿಕ್ರಮ್ ಲ್ಯಾಂಡರ್​ನಿಂದ ಬರುತ್ತಿರುವ ಅಮೂಲ್ಯವಾದ ಡೇಟಾವನ್ನು ಇಸ್ರೋ ವಿಶ್ಲೇಷಿಸುತ್ತಲೇ ಇರುವುದರಿಂದ, ಹೆಚ್ಚಿನ ಮಾಹಿತಿಗಾಗಿ ಜಗತ್ತು ಕುತೂಹಲದಿಂದ ಕಾಯುತ್ತಿದೆ.

ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದ ವಿಕ್ರಮ್ ಲ್ಯಾಂಡರ್, ಚಂದ್ರನ ಪರಿಸರದ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾದ ನಾಲ್ಕು ಪೇಲೋಡ್​ಗಳನ್ನು ಹೊತ್ತೊಯ್ದಿದೆ. ಇವುಗಳಲ್ಲಿ ಮೇಲ್ಮೈ ಪ್ಲಾಸ್ಮಾ ಸಾಂದ್ರತೆಯನ್ನು ಅಳೆಯುವ ರಂಭಾ (RAMBHA) ಕೂಡ ಸೇರಿದೆ; ಚಂದ್ರನ ಮಣ್ಣಿನ ಉಷ್ಣ ಗುಣಲಕ್ಷಣಗಳನ್ನು ಅಳೆಯುವ ಚಾಸ್ಟೆ, ಲ್ಯಾಂಡಿಂಗ್ ಸೈಟ್ ಸುತ್ತಲೂ ಭೂಕಂಪನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಐಎಲ್ಎಸ್ಎ, ಮತ್ತು ಚಂದ್ರನ ವ್ಯವಸ್ಥೆಯ ಚಲನಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಎಲ್ಆರ್​ಎ ಗಳನ್ನು ಇದು ಹೊಂದಿದೆ.

ಇದನ್ನೂ ಓದಿ : ಆದಿತ್ಯ-ಎಲ್​1ರ ಮೊದಲ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ

ABOUT THE AUTHOR

...view details