ಲಕ್ನೋ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಇನ್ನು ಮುಂದೆ ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್ ಅನ್ನು ತನ್ನ ಕಲಾಪದಲ್ಲಿ ಅಳವಡಿಸಿಕೊಳ್ಳಲಿದೆ. ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಇಡೀ ಪ್ರಕ್ರಿಯೆಯನ್ನು ಇ-ಟೆಂಡರ್ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ.
ಹೊಸ ಸಾಫ್ಟ್‌ವೇರ್ ವಿಧಾನಸಭೆಯಲ್ಲಿ ನಡೆಯುವ ಅಧಿವೇಶನಗಳು ಮತ್ತಷ್ಟು ಸುಗಮವಾಗಿ ಮತ್ತು ರಚನಾತ್ಮಕವಾಗಿ ನಡೆಯಲು ಅನುಕೂಲ ಮಾಡಿಕೊಡುವ ನಿರೀಕ್ಷೆಯಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. "ಕಲಾಪಗಳ ನೇರ ಪ್ರಸಾರದ ಸಮಯದಲ್ಲಿ ಗದ್ದಲದ ಶಬ್ದಗಳು ಹೆಚ್ಚಾಗಿ ಕೇಳಿಸುವ ಸಮಸ್ಯೆಯನ್ನು ಇದು ನಿವಾರಿಸಲಿದೆ. ಇದು ಲೈವ್ ಫೀಡ್ಗಳನ್ನು ಸುಧಾರಿಸುವುದಲ್ಲದೆ, ವಿಧಾನಸಭಾ ಕಲಾಪಗಳ ಸಮಯದಲ್ಲಿ ವೀಡಿಯೊ ಔಟ್ಪುಟ್ಗೆ ಸಹಾಯ ಮಾಡಲಿದೆ" ಎಂದು ಅವರು ಹೇಳಿದರು.
ಇಡೀ ಬಿಡ್ಡಿಂಗ್ ಪ್ರಕ್ರಿಯೆಯನ್ನು ಇ-ಟೆಂಡರ್ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ. ಪೋರ್ಟಲ್ ಮೂಲಕ ಇ-ಟೆಂಡರ್ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನಾಂಕವಾಗಿದ್ದು, ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಕೆಲಸ ಹಂಚಿಕೆ ಮತ್ತು ಸಾಫ್ಟ್‌ವೇರ್ ಖರೀದಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ ಅನುಷ್ಠಾನದ ಮೂಲಕ ದೇಶಾದ್ಯಂತ ವಿವಿಧ ರಾಜ್ಯಗಳು ಈಗಾಗಲೇ ತಮ್ಮ ವಿಧಾನಸಭೆಯ ಕಾರ್ಯಕಲಾಪಗಳನ್ನು ಡಿಜಿಟಲೀಕರಣಗೊಳಿಸಿವೆ.