ನವದೆಹಲಿ : ಟ್ವಿಟರ್‌ನಲ್ಲಿ ನಡೆಯುತ್ತಿರುವ ಬ್ಲೂ ಟಿಕ್ ಪ್ರಹಸನವು ಈಗ ಮತ್ತೊಂದು ಟ್ವಿಸ್ಟ್ ತೆಗೆದುಕೊಂಡಿದೆ. ಹಲವಾರು ಪ್ರಖ್ಯಾತ ಮತ್ತು ಪ್ರಭಾವಿ ಟ್ವಿಟರ್ ಬಳಕೆದಾರರ ಬ್ಲೂಟಿಕ್ ಮರಳಿ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಟ್ವಿಟರ್ನ ಪೇಡ್ ಸಬ್ಸ್ಕ್ರೈಬರ್ ಆಗಿರದಿದ್ದರೂ ಸಹ ಇವರಿಗೆ ಬ್ಲೂ ಟಿಕ್ ಮರಳಿ ಬಂದಿವೆ. ಏಪ್ರಿಲ್ 20ರ ನಂತರ ಸಾಂಪ್ರದಾಯಿಕವಾಗಿ ನೀಡಲಾದ ಬ್ಲೂಟಿಕ್ಗಳನ್ನು ತೆಗೆದು ಹಾಕಲಾಗುವುದು ಎಂದು ಇತ್ತೀಚೆಗೆ ಮಸ್ಕ್ ಘೋಷಿಸಿದ್ದರು.
ತಮಗೆ ಟ್ವಿಟರ್ ಬ್ಲೂ ಟಿಕ್ ಉಚಿತವಾಗಿ ಮರಳಿ ಸಿಕ್ಕಿದೆ ಎಂದು ಅಮೆರಿಕದ ಪತ್ರಕರ್ತ ಮ್ಯಾಟ್ ಬೈಂಡರ್ ಟ್ವೀಟ್ ಮಾಡಿದ್ದಾರೆ. ಎಲೋನ್ ಮಸ್ಕ್ ನನಗೆ ಉಚಿತವಾಗಿ ಬ್ಲೂಟಿಕ್ ನೀಡಿದ್ದಾರೆ. ಹಾಗಂತ ನಾನು ಹಾಲಿವುಡ್ ಸೆಲೆಬ್ರಿಟಿಯೂ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯ ಪತ್ರಕರ್ತೆ ನಿಧಿ ರಜ್ದಾನ್ ಅವರಿಗೆ ಕೂಡ ಬ್ಲೂ ಟಿಕ್ ಮರಳಿ ಬಂದಿದೆ. ಯಾವುದೋ ಕಾರಣಕ್ಕೆ ನನಗೆ ಬ್ಲೂಟಿಕ್ ಮರಳಿ ಸಿಕ್ಕಿದೆ, ಆದರೆ ಅದನ್ನು ಪಡೆಯಲು ನಾನು ಹಣ ಪಾವತಿಸಿಲ್ಲ ಎಂದು ನಿಧಿ ಟ್ವೀಟ್ ಮಾಡಿದ್ದಾರೆ. ಇದಲ್ಲದೆ, ಅಮೇರಿಕದ ಮಾಧ್ಯಮ ಸಂಸ್ಥೆ ನ್ಯೂಯಾರ್ಕ್ ಟೈಮ್ಸ್ ಗೆ ಕೂಡ ಟಿಕ್ ಮಾರ್ಕ್ ಪುನಃ ಸಿಕ್ಕಿದೆ.
ಇದರ ಜೊತೆಗೆ ಅಮೆರಿಕಾದ ಲಾಭೋದ್ದೇಶವಿಲ್ಲದ ಮಾಧ್ಯಮ ಸಂಸ್ಥೆಯಾಗಿರುವ NPR (ನ್ಯಾಷನಲ್ ಪಬ್ಲಿಕ್ ರೇಡಿಯೋ)ನ ಬಳಕೆಯಲ್ಲಿಲ್ಲದ ಟ್ವಿಟರ್ ಖಾತೆಗೆ ಬ್ಲೂ ಟಿಕ್ ಕಾಣಿಸಿಕೊಂಡಿದೆ. ಭಾರತದಲ್ಲಿ, ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಹಾಸ್ಯನಟ ವೀರ್ ದಾಸ್ ಸೇರಿದಂತೆ ಹಲವಾರು ಜನಪ್ರಿಯ ಸೆಲೆಬ್ರಿಟಿಗಳಿಗೆ ಟ್ವಿಟರ್ ಬ್ಲೂ ಟಿಕ್ ಮರಳಿ ಬಂದಿರುವುದು ವಿಶೇಷ. ಟ್ವಿಟರ್ ಬ್ಲೂ ಅನ್ನು ಫೆಬ್ರವರಿ 8 ರಂದು ಭಾರತದಲ್ಲಿ ಪ್ರಾರಂಭಿಸಲಾಯಿತು. ಈಗ ಟ್ವಿಟರ್ ಬ್ಲೂ ಟಿಕ್ ಪಡೆಯಬೇಕಾದರೆ ವೆಬ್‌ನಲ್ಲಿ ರೂ 650 ಮತ್ತು ಮೊಬೈಲ್ ಸಾಧನಗಳಲ್ಲಿ ರೂ 900 ರ ಮಾಸಿಕ ಚಂದಾದಾರಿಕೆ ಶುಲ್ಕ ಪಾವತಿಸಬೇಕಾಗುತ್ತದೆ.