ಟ್ವಿಟರ್ ಇನ್ನು ಮುಂದೆ ತನ್ನ ಚಂದಾದಾರರ (ಒಪ್ಪಿಗೆ ಸೂಚಿಸಿದ ಬಳಕೆದಾರರು) ಇಮೇಲ್ ವಿಳಾಸಗಳನ್ನು ಕಂಟೆಂಟ್ ಕ್ರಿಯೇಟರ್ಗಳೊಂದಿಗೆ ಹಂಚಿಕೊಳ್ಳುವುದಾಗಿ ಘೋಷಿಸಿದೆ. ಕಂಟೆಂಟ್ ಕ್ರಿಯೇಟರ್ಗಳು ಟ್ವಿಟರ್ನಿಂದ ಹೊರನಡೆಯುವ ಸಂದರ್ಭ ಬಂದಲ್ಲಿ ಅವರು ತಮ್ಮ ಚಂದಾದಾರರನ್ನು ತಮ್ಮೊಂದಿಗೆ ಕರೆದೊಯ್ಯುವ ಅವಕಾಶ ನೀಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಬುಧವಾರ ಹೇಳಿದ್ದಾರೆ.
ಟ್ವಿಟರ್‌ನ ಹೊಸ ಕ್ರಮವು ಟ್ವಿಟರ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದ್ದು, ಇದರ ಬಗ್ಗೆ ವಿವರವಾದ ಮಾಹಿತಿ ತಿಳಿಯಲು ಚಂದಾದಾರರು ಮತ್ತು ಕಂಟೆಂಟ್ ಕ್ರಿಯೇಟರ್ಗಳು ತಡಕಾಡುತ್ತಿದ್ದಾರೆ. ಒಂದೊಮ್ಮೆ ತಮ್ಮ ಇಮೇಲ್ ಐಡಿಗಳನ್ನು ಕಂಟೆಂಟ್ ಕ್ರಿಯೇಟರ್ಗಳೊಂದಿಗೆ ಹಂಚಿಕೊಳ್ಳಬಹುದಾದರೆ ಅವರ ಇಮೇಲ್ ಐಡಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬಹುದೇ ಎಂದು ಮಸ್ಕ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.
ತಾವೂ ಕೂಡ ಬೇರೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಚಂದಾದಾರರನ್ನು ಹೊಂದಿರುವುದರಿಂದ ಕಂಟೆಂಟ್ ಕ್ರಿಯೇಟರ್ಗಳ ಇಮೇಲ್ ಐಡಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಬಹುದಲ್ಲ ಎಂದು ಅನೇಕರು ಕೇಳಿದ್ದಾರೆ. ಅಲ್ಲದೆ ಈ ಮಾಹಿತಿಯನ್ನು ಯಾವ ಮಾದರಿಯಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಹೊಸ ಸಿಇಒ ಆಗಮನದ ನಂತರ ಮಹತ್ವದ ನಿರ್ಧಾರ: ಟ್ವಿಟರ್ ಸಿಇಒ ಆಗಿ ಲಿಂಡಾ ಯಕರಿನೊ ಅವರು ಅಧಿಕಾರ ವಹಿಸಿಕೊಂಡ ಎರಡು ದಿನಗಳ ನಂತರ ಟ್ವಿಟರ್ ಈ ಮಹತ್ವದ ಕ್ರಮ ಜಾರಿಗೊಳಿಸಿರುವುದು ಗಮನಾರ್ಹ. ಅಮೆರಿಕದಲ್ಲಿ ಟ್ವಿಟರ್ ಜಾಹೀರಾತು ಆದಾಯ ಕಡಿಮೆಯಾಗಿರುವುದು ಹಾಗೂ ಎಲೋನ್ ಮಸ್ಕ್ ಅವರು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವಂತೆ ಮಾಡಲು ಟ್ವಿಟರ್‌ಗೆ ಹೊಸ ಸಿಇಓ ನೇಮಕ ಮಾಡಲಾಗಿದೆ.
ಈ ಮುನ್ನ ಯಕರಿನೊ ಎನ್ಬಿಸಿ ಯುನಿವರ್ಸಲ್ ಕಂಪನಿಯ ಗ್ಲೋಬಲ್ ಆಡ್ವರ್ಟೈಸಿಂಗ್ ಆ್ಯಂಡ್ ಪಾರ್ಟನರ್ಶಿಪ್ಸ್ ನ ಮುಖ್ಯಸ್ಥರಾಗಿದ್ದರು. ಇದೀಗ ಅವರು ತಮ್ಮ ಲಿಂಕ್ಡ್ಇನ್ ಪ್ರೊಫೈಲ್ನಲ್ಲಿ ತಮ್ಮ ಬಯೋ ಅನ್ನು ಟ್ವಿಟರ್ ಸಿಇಓ ಎಂದು ಅಪ್ಡೇಟ್ ಮಾಡಿದ್ದಾರೆ. ಟ್ವಿಟರ್‌ನ ಅಮೆರಿಕದಲ್ಲಿನ ಜಾಹೀರಾತು ಆದಾಯವು ಏಪ್ರಿಲ್ 1 ರಿಂದ ಮೇ ಮೊದಲ ವಾರದ ಐದು ವಾರಗಳವರೆಗೆ 88 ಮಿಲಿಯನ್ ಡಾಲರ್ ಆಗಿತ್ತು. ಇದು ಹಿಂದಿನ ವರ್ಷಕ್ಕಿಂತ 59 ಶೇಕಡಾ ಕಡಿಮೆಯಾಗಿದೆ. "ಟ್ವಿಟರ್‌ನ ಆಂತರಿಕ ಮುನ್ಸೂಚನೆಗಳಲ್ಲಿ ಕಂಪನಿಯ ಜಾಹೀರಾತು ಮಾರಾಟ ಕ್ಷೀಣಿಸಲಿದೆ ಮತ್ತು ಇದು ಹೊಸ ಮುಖ್ಯ ಕಾರ್ಯನಿರ್ವಾಹಕರಿಗೆ ಕಠಿಣ ಸವಾಲನ್ನು ಒಡ್ಡಲಿದೆ" ಎಂದು ವರದಿ ಹೇಳಿದೆ.
"ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ನಿಮ್ಮ ದೃಷ್ಟಿಕೋನದಿಂದ ನಾನು ದೀರ್ಘಕಾಲದಿಂದ ಸ್ಫೂರ್ತಿ ಪಡೆದಿದ್ದೇನೆ. ಈ ದೃಷ್ಟಿಯನ್ನು ಟ್ವಿಟರ್‌ಗೆ ತರಲು ಮತ್ತು ಈ ವ್ಯವಹಾರವನ್ನು ಒಟ್ಟಿಗೆ ಪರಿವರ್ತಿಸಲು ಸಹಾಯ ಮಾಡಲು ನಾನು ಉತ್ಸುಕಳಾಗಿದ್ದೇನೆ" ಎಂದು ಲಿಂಡಾ ಯಕರಿನೊ ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ವಿಟರ್‌ನ ಭವಿಷ್ಯಕ್ಕಾಗಿ ನಾನು ಬದ್ಧಳಾಗಿದ್ದೇನೆ. ಆ ಭವಿಷ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಅತ್ಯಗತ್ಯ. ಎಲ್ಲದಕ್ಕೂ ನಾನು ಇಲ್ಲಿದ್ದೇನೆ. ಸಂಭಾಷಣೆಯನ್ನು ಮುಂದುವರಿಸೋಣ ಮತ್ತು ಟ್ವಿಟರ್ 2.0 ಅನ್ನು ಒಟ್ಟಿಗೆ ನಿರ್ಮಿಸೋಣ ಎಂದು ಅವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಐಡಿ ವೆರಿಫಿಕೇಶನ್ ಆರಂಭಿಸಿದ ಲಿಂಕ್ಡ್ ಇನ್