ಕರ್ನಾಟಕ

karnataka

ETV Bharat / science-and-technology

ಟ್ವೀಟ್​ ಮಾಡಿ ಹಣ ಗಳಿಸಿ: Revenue Sharing ಯೋಜನೆ ಆರಂಭಿಸಿದ Twitter! - ಜನಪ್ರಿಯ ಮೈಕ್ರೊಬ್ಲಾಗಿಂಗ್ ಪ್ಲಾಟ್​ಫಾರ್ಮ್

ಟ್ವಿಟರ್​ ತನ್ನ ಬಹು ನಿರೀಕ್ಷಿತ ಆದಾಯ ಹಂಚಿಕೆ ಯೋಜನೆ ಪ್ರಾರಂಭಿಸಿದೆ. ಟ್ವೀಟ್ ಮಾಡುವ ಮೂಲಕ ಬಳಕೆದಾರರು ಜಾಹೀರಾತು ಆದಾಯದಲ್ಲಿ ಪಾಲು ಪಡೆಯಲು ಇನ್ನು ಮುಂದೆ ಸಾಧ್ಯವಾಗಲಿದೆ.

Twitter Creator Ads Revenue Sharing program launch
ಟ್ವೀಟ್​ ಮಾಡಿ ಹಣ ಗಳಿಸಿ; Revenue Sharing ಯೋಜನೆ ಆರಂಭಿಸಿದ Twitter!

By

Published : Jul 14, 2023, 7:06 PM IST

ಬೆಂಗಳೂರು: ವಿಶ್ವದ ಜನಪ್ರಿಯ ಮೈಕ್ರೊಬ್ಲಾಗಿಂಗ್ ಪ್ಲಾಟ್​ಫಾರ್ಮ್​ ಆಗಿರುವ Twitter ಆಯ್ದ ಬಳಕೆದಾರರೊಂದಿಗೆ ಜಾಹೀರಾತು ಆದಾಯ ಹಂಚಿಕೊಳ್ಳಲು ಪ್ರಾರಂಭಿಸಿದೆ. ಅಂದರೆ ಬಳಕೆದಾರರು ಟ್ವೀಟ್ ಮಾಡಿದ್ದಕ್ಕೆ ಈಗ ಹಣ ಪಡೆಯುತ್ತಿದ್ದಾರೆ. ಬಳಕೆದಾರರು ಅಥವಾ ವೃತ್ತಿಪರ ಕಂಟೆಂಟ್​ ಕ್ರಿಯೇಟರ್​ಗಳು ತಮ್ಮ ಟ್ವೀಟ್​ಗಳಿಗೆ ಆದಾಯ ಪಡೆಯಬೇಕಾದರೆ "ಜಾಹೀರಾತು ಆದಾಯ ಹಂಚಿಕೆ" ಮತ್ತು "ಕ್ರಿಯೇಟರ್ ಚಂದಾದಾರಿಕೆಗಳು" (Ads Revenue Sharing and Creator Subscriptions) ಯೋಜನೆಗೆ ಸೈನ್ ಅಪ್ ಮಾಡಬೇಕಾಗುತ್ತದೆ.

ಸ್ಟ್ರೈಪ್ (Stripe) ಮೂಲಕ ಪೇಮೆಂಟ್ಸ್​ ಸೌಲಭ್ಯವನ್ನು ಬೆಂಬಲಿಸುವ ಎಲ್ಲ ದೇಶಗಳಲ್ಲಿ ಕಂಟೆಂಟ್​ ಕ್ರಿಯೇಟರ್ಸ್​ಗಳಿಗೆ ಜಾಹೀರಾತು ಆದಾಯ ಹಂಚಿಕೆ ಲಭ್ಯವಿರುತ್ತದೆ ಎಂದು ಟ್ವಿಟರ್ ಹೇಳಿದೆ. ಇದರರ್ಥ ಭಾರತದಲ್ಲಿನ ಬಳಕೆದಾರರು ಸದ್ಯಕ್ಕೆ ತಮ್ಮ ಟ್ವೀಟ್​ಗಳಿಗೆ ಆದಾಯ ಪಡೆಯಲು ಸಾಧ್ಯವಿಲ್ಲ. ಆದಾಗ್ಯೂ ಟ್ವಿಟರ್​ ಮುಂದಿನ ದಿನಗಳಲ್ಲಿ ಈ ನೀತಿಯನ್ನು ಬದಲಾಯಿಸಬಹುದು ಹಾಗೂ ಭಾರತದಲ್ಲಿನ ಕ್ರಿಯೇಟರ್​ಗಳು ಸಹ ಆದಾಯ ಪಾಲು ಪಡೆಯಲು ಸಾಧ್ಯವಾಗಬಹುದು.

ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ (ಜೇಮ್ಸ್ ಡೊನಾಲ್ಡ್ಸನ್) ಜಾಹೀರಾತು ಹಂಚಿಕೆಯ ಆದಾಯದ ಭಾಗವಾಗಿ ಟ್ವಿಟರ್​ನಿಂದ 25,000 ಡಾಲರ್​ (Rs 21 ಲಕ್ಷ) ಗಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಲವಾರು ಬಳಕೆದಾರರು 5 ಲಕ್ಷ ರೂ.ಗಳವರೆಗೆ ಆದಾಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಆರಂಭಿಕವಾಗಿ ನಿರ್ದಿಷ್ಟ ಗುಂಪಿನ ಬಳಕೆದಾರರಿಗೆ ಆದಾಯ ಹಂಚಿಕೆ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಟ್ವಿಟರ್​ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ. ಪೇಮೆಂಟ್​ ಪಡೆಯಲು ಅಂಥವರನ್ನು ಆಹ್ವಾನಿಸಲಾಗುತ್ತದೆ. ಈ ಯೋಜನೆಗೆ ಸೈನ್ ಅಪ್ ಮಾಡಬೇಕಾದರೆ ಅಂಥ ಬಳಕೆದಾರರು ಟ್ವಿಟರ್ ಬ್ಲೂ ಟಿಕ್​ ಪಡೆದಿರಬೇಕು ಅಥವಾ ವೆರಿಫೈಡ್​ ಸಂಸ್ಥೆಗಳ ಸದಸ್ಯರಾಗಿರಬೇಕು. ಅಲ್ಲದೇ ಅವರು ಕಳೆದ ಮೂರು ತಿಂಗಳುಗಳಲ್ಲಿ ಕನಿಷ್ಠ ಐದು ಮಿಲಿಯನ್ ಇಂಪ್ರೆಶನ್‌ಗಳ ಪೋಸ್ಟ್‌ಗಳನ್ನು ಹೊಂದಿರಬೇಕು.

ಈಗಾಗಲೇ ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳಿಗೆ ಸೈನ್ ಅಪ್ ಮಾಡಿರುವ ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಖಾತೆಗಳಿಗೆ ಪಾವತಿಯ ಮೊತ್ತವು ಪ್ರಸ್ತುತ ಕೆಲ ಸಾವಿರ ಡಾಲರ್‌ಗಳಿಂದ ಹಿಡಿದು ಸುಮಾರು 40,000 ಡಾಲರ್​ವರೆಗೆ ಇರುತ್ತದೆ. ಬಳಕೆದಾರರು ಅಥವಾ ಕಂಟೆಂಟ್​ ಕ್ರಿಯೇಟರ್ಸ್​ಗಳು ಟ್ವಿಟರ್​ನ ಕ್ರಿಯೇಟರ್ ಮಾನಿಟೈಸೇಶನ್ ಸ್ಟ್ಯಾಂಡರ್ಡ್‌ಗಳನ್ನು ಪಾಸ್ ಮಾಡಬೇಕಾಗುತ್ತದೆ. ಇದು ಅವರ ವಯಸ್ಸು, ಅವರ ದೇಶ ಮತ್ತು ಯಾವ ರೀತಿಯ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂಬಂಥ ನಿಯಮಗಳನ್ನು ಒಳಗೊಂಡಿರುತ್ತದೆ.

ಮೆಟಾದ ಥ್ರೆಡ್ಸ್​ ಸೇರಿದಂತೆ ಇನ್ನೂ ಹಲವಾರು ಮೈಕ್ರೊಬ್ಲಾಗಿಂಗ್ ಪ್ಲಾಟ್​ಫಾರ್ಮ್​ಗಳು ತೀವ್ರ ಪೈಪೋಟಿ ಒಡ್ಡಿರುವ ಕಾರಣದಿಂದ ಟ್ವಿಟರ್​ ಆದಾಯ ಹಂಚಿಕೆ ಯೋಜನೆ ಜಾರಿಗೆ ತಂದಿದೆ ಎನ್ನಲಾಗಿದೆ. ಮೆಟಾದ ಥ್ರೆಡ್ಸ್​ ಆ್ಯಪ್ ಆರಂಭವಾದ ಕೆಲವೇ ದಿನಗಳಲ್ಲಿ 100 ಮಿಲಿಯನ್ ಡೌನ್​ಲೋಡ್ ಆಗಿರುವುದು ಗಮನಾರ್ಹ. ಜನವರಿಯಿಂದ ಟ್ವಿಟರ್ ಬಳಕೆದಾರರ ಟ್ರಾಫಿಕ್ ಕ್ಷೀಣಿಸುತ್ತಿದೆ ಎಂದು ಕ್ಲೌಡ್‌ಫ್ಲೇರ್ ಡೇಟಾ ತೋರಿಸಿದೆ. ಹೀಗಾಗಿ ಟ್ವಿಟರ್​ ಮತ್ತೆ ತನ್ನತ್ತ ಬಳಕೆದಾರರನ್ನು ಸೆಳೆಯಲು ಆಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ :Chandrayaan-3: ಚಂದ್ರಯಾನಕ್ಕೆ ಎರಡು ದಶಕ... 2003 ರಿಂದ ಸಾಗಿ ಬಂದ ದಾರಿ

ABOUT THE AUTHOR

...view details