ಸ್ಯಾನ್ ಫ್ರಾನ್ಸಿಸ್ಕೊ( ಅಮೆರಿಕ): ಎಲೋನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದಲ್ಲಿ ಅವರು ಟ್ವಿಟರ್ನಲ್ಲಿರುವ ಶೇ 75 ರಷ್ಟು ಸಿಬ್ಬಂದಿ ಕಡಿತಗೊಳಿಸಲಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ, ಹೀಗೆ ಸಾಮೂಹಿಕವಾಗಿ ಸಿಬ್ಬಂದಿ ವಜಾ ಮಾಡುವುದು ಬೇಜವಾಬ್ದಾರಿತನದ ಕ್ರಮವಾಗಲಿದೆ ಎಂದು ಟ್ವಿಟರ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ವರದಿಯ ಪ್ರಕಾರ, ಮಸ್ಕ್ 44 ಶತಕೋಟಿ ಡಾಲರ್ ಮೌಲ್ಯದ ಟ್ವಿಟರ್ ಸ್ವಾಧೀನತೆಯನ್ನು ಅಂತಿಮಗೊಳಿಸುವ ಗಡುವು ಸಮೀಪಿಸುತ್ತಿದೆ. ಈ ಸಮಯದಲ್ಲಿ ಕಂಪನಿಯ ಕೆಲ ಉದ್ಯೋಗಿಗಳು ಶೇ 75ರಷ್ಟು ಸಿಬ್ಬಂದಿ ವಜಾಗೊಳಿಸುವ ಪ್ರಸ್ತಾಪ ವಿರೋಧಿಸಿ ಮಸ್ಕ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಟ್ವಿಟರ್ನ ಶೇ 75ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸುವ ಮಸ್ಕ್ ಅವರ ಯೋಜನೆಯಿಂದ ಸಾಮಾಜಿಕ ಚರ್ಚೆಯ ವೇದಿಕೆ ಕಲ್ಪಿಸುವ ಟ್ವಿಟರ್ನ ಸಾಮರ್ಥ್ಯಕ್ಕೆ ಹಾನಿಯಾಗಲಿದೆ. ಇಂತಹದೊಂದು ಬೆದರಿಕೆಯಿಂದ ನಮ್ಮ ಬಳಕೆದಾರರು ಮತ್ತು ಗ್ರಾಹಕರು ಕಂಪನಿಯ ಮೇಲಿನ ನಂಬಿಕೆ ಕಳೆದುಕೊಳ್ಳಲಿದ್ದಾರೆ.
ಇದು ಕೆಲಸಗಾರರನ್ನು ಬಹಿರಂಗವಾಗಿಯೇ ಬೆದರಿಸುವ ಕ್ರಮವಾಗಲಿದೆ. ಸತತ ಕಿರುಕುಳ ಮತ್ತು ಬೆದರಿಕೆಗಳ ವಾತಾವರಣದಲ್ಲಿ ನಾವು ಸರಿಯಾಗಿ ಕೆಲಸ ಮಾಡಲಾರೆವು ಎಂದು ಪತ್ರದಲ್ಲಿ ಬರೆಯಲಾಗಿದೆ. ಪತ್ರವು ಕಂಪನಿಯ ಪ್ರಸ್ತುತ ಮತ್ತು ಭವಿಷ್ಯದ ನಾಯಕತ್ವಕ್ಕೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಹ ಒಳಗೊಂಡಿದೆ.