ನವದೆಹಲಿ : ಓಪನ್ ಎಐ ಕಂಪನಿಯ ಚಾಟ್ಬಾಟ್ ಆಗಿರುವ ಚಾಟ್ಜಿಪಿಟಿ (ChatGPT) ಯನ್ನು ತೀವ್ರವಾಗಿ ವಿರೋಧಿಸಿರುವ ಟ್ವಿಟರ್ ಸಿಇಒ ಎಲೋನ್ ಮಸ್ಕ್, ಚಾಟ್ ಜಿಪಿಟಿಗೆ ಎದುರಾಳಿಯಾಗಿ ತಮ್ಮದೇ ಆದ ಟ್ರುಥ್ ಜಿಪಿಟಿ (TruthGPT) ಹೆಸರಿನ ಚಾಟ್ ಬಾಟ್ ತಯಾರಿಸಲು ಮುಂದಾಗಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿದ ಮಸ್ಕ್, ಮಾನವ ಕುಲದ ನಾಶವನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆಗೆ ಪರ್ಯಾಯ ತಂತ್ರಜ್ಞಾನವನ್ನು ತಯಾರಿಸುವುದು ಅಗತ್ಯವಿದೆ ಎಂದು ಹೇಳಿದ್ದಾರೆ.
ಇದಕ್ಕಾಗಿ ನಾನು ಟ್ರುಥ್ ಜಿಪಿಟಿ ಹೆಸರಿನ ಏನೋ ಒಂದನ್ನು ತಯಾರಿಸಲು ಬಯಸುತ್ತೇನೆ ಅಥವಾ ಈ ವಿಶ್ವದ ನೈಜ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಬಲ್ಲ ಅತಿ ಹೆಚ್ಚು ಸತ್ಯವನ್ನು ಸಂಶೋಧಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ತಯಾರಿಸಲು ಬಯಸುತ್ತೇನೆ ಎಂದಿದ್ದಾರೆ. ನಾವು ಈ ವಿಶ್ವದ ಅತ್ಯಂತ ಅದ್ಭುತ ಜೀವಿಗಳಾಗಿದ್ದೇವೆ. ವಿಶ್ವವನ್ನು ಅರ್ಥಮಾಡಿಕೊಳ್ಳುವ ಕೃತಕ ಬುದ್ಧಿಮತ್ತೆ ಸಾಧನವು ಮಾನವರಿಗೆ ಕೆಟ್ಟದ್ದನ್ನು ಮಾಡಲಾರದು. ಹೀಗಾಗಿ ಇಂಥದೊಂದು ತಂತ್ರಜ್ಞಾನ ಆವಿಷ್ಕರಿಸುವುದು ಅಗತ್ಯವಾಗಿದೆ ಎಂದು ನನಗನಿಸುತ್ತದೆ ಎಂದು ಮಸ್ಕ್ ಹೇಳಿದ್ದಾರೆ.
ನಮಗೆ ಬೇಕಿರುವುದು ಟ್ರುಥ್ ಜಿಪಿಟಿ:ಫೆಬ್ರವರಿಯಲ್ಲಿ ಮಸ್ಕ್ ಮೊದಲ ಬಾರಿಗೆ ನಮಗೆ ಬೇಕಾಗಿರುವುದು ಟ್ರುಥ್ ಜಿಪಿಟಿ ಎಂದು ಟ್ವೀಟ್ ಮಾಡಿದ್ದಾರೆ. ಬಿಲಿಯನೇರ್ ಎಲೋನ್ ಮಸ್ಕ್ X.AI ಹೆಸರಿನ ಹೊಸ ಕಂಪನಿಯನ್ನು ಆರಂಭಿಸಿದ್ದಾರೆ. ಇದು ChatGPTಯ ಈ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಆವಿಷ್ಕಾರ ಮಾಡಲಿದೆ. ಮೈಕ್ರೋಸಾಫ್ಟ್ ಬೆಂಬಲಿತ OpenAI ಗೆ ಪ್ರತಿಸ್ಪರ್ಧಿಯಾಗಿ ಆರ್ಟಿಫಿಶಿಯಲ್ ಕಂಪನಿಯೊಂದನ್ನು ರಚಿಸುವ ಇರಾದೆ ಮಸ್ಕ್ ಅವರದ್ದಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ChatGPT ಮತ್ತು GPT-4 ಪ್ರಪಂಚದಾದ್ಯಂತ ತುಂಬಾ ಜನಪ್ರಿಯವಾಗುತ್ತಿವೆ. ಮಾರ್ಚ್‌ನಲ್ಲಿ ಆ್ಯಪಲ್‌ನ ಸಹ ಸಂಸ್ಥಾಪಕರಾದ ಮಸ್ಕ್ ಮತ್ತು ಸ್ಟೀವ್ ವೋಜ್ನಿಯಾಕ್ ಸೇರಿದಂತೆ ಹಲವಾರು ಉನ್ನತ ಉದ್ಯಮಿಗಳು ಮತ್ತು AI ಸಂಶೋಧಕರು ಬಹಿರಂಗ ಪತ್ರವೊಂದನ್ನು ಬರೆದು, ಎಲ್ಲಾ AI ಲ್ಯಾಬ್‌ಗಳು GPT-4 ಗಿಂತ ಹೆಚ್ಚು ಶಕ್ತಿಯುತವಾದ AI ವ್ಯವಸ್ಥೆಗಳ ರಚನೆಯನ್ನು ಕನಿಷ್ಠ ಆರು ತಿಂಗಳವರೆಗೆ ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದ್ದರು.