ಬೆಂಗಳೂರು :ಕಾಲರ್ ಐಡಿ ಗುರುತಿಸುವ ಆ್ಯಪ್ ಆಗಿರುವ ಟ್ರೂಕಾಲರ್ iOS ಬಳಕೆದಾರರಿಗೆ ಲೈವ್ ಕಾಲರ್ ಐಡಿ ಬೆಂಬಲಿಸುವ ಹೊಸ ಅಪ್ಡೇಟ್ ಒಂದನ್ನು ಹೊರತಂದಿದೆ. ಇಷ್ಟು ದಿನ ಈ ವೈಶಿಷ್ಟ್ಯ ಐಫೋನ್ ಬಳಕೆದಾರರಿಗೆ ಲಭ್ಯವಾಗಿರಲಿಲ್ಲ. ಈ ಹೊಸ ವೈಶಿಷ್ಟ್ಯವು ಹಣ ಪಾವತಿಸಿ ಟ್ರೂಕಾಲರ್ ಸೇವೆಗಳನ್ನು ಬಳಸುವ ಗ್ರಾಹಕರಿಗೆ ಲಭ್ಯವಿರುತ್ತದೆ. ಈ ಯೋಜನೆ ತಿಂಗಳಿಗೆ 75 ರೂಪಾಯಿಯಿಂದ ಆರಂಭವಾಗಿ ವರ್ಷಕ್ಕೆ 4,999 ರೂಪಾಯಿ ಶ್ರೇಣಿಯಲ್ಲಿ ಲಭ್ಯವಾಗಲಿದೆ. ಹೊಸ ಕಾಲರ್ ಐಡಿ ವೈಶಿಷ್ಟ್ಯವು ಐಫೋನ್ ಬಳಕೆದಾರರಿಗೆ ಆಂಡ್ರಾಯ್ಡ್‌ನಲ್ಲಿರುವಂತೆ ತಡೆರಹಿತವಾಗಿರುವುದಿಲ್ಲ. ಈ ವೈಶಿಷ್ಟ್ಯವನ್ನು ಬಳಸಲು ಐಫೋನ್ ಬಳಕೆದಾರರು ಸಿರಿಯೊಂದಿಗೆ ಸಂವಹನ ನಡೆಸಬೇಕಾಗುತ್ತದೆ.
ಲೈವ್ ಕಾಲರ್ ಐಡಿ ಸೇವೆಯನ್ನು ಬಳಸಬೇಕಾದರೆ ಐಫೋನ್ ಬಳಕೆದಾರರು iOS 16 ಅಥವಾ ಅದಕ್ಕೂ ಮೇಲಿನ ಐಒಎಸ್ ಆವೃತ್ತಿಯನ್ನು ಹೊಂದಿರಬೇಕಾಗುತ್ತದೆ. ಇನ್ನು ಕರೆ ಬರುವಾಗ ಟ್ರೂಕಾಲರ್ ಬಳಸಬೇಕಾದರೆ ಐಫೋನ್ ಬಳಕೆದಾರರು Hey Siri, Search Truecaller ಎಂದು ಸಿರಿಗೆ ನಿರ್ದೇಶನ ನೀಡಬೇಕಾಗುತ್ತದೆ. ಹೀಗೆ ಮಾಡಿದಾಗ ಸಿರಿ ಸ್ಕ್ರೀನ್ ಮೇಲೆ ಗೋಚರಿಸುವ ಸಂಖ್ಯೆಯನ್ನು ಸೆರೆ ಹಿಡಿಯುತ್ತದೆ ಮತ್ತು ಅಪ್ಲಿಕೇಶನ್‌ನಲ್ಲಿ ಅದನ್ನು ಹುಡುಕಿ ಮತ್ತು ಫಲಿತಾಂಶವನ್ನು ಬಳಕೆದಾರರಿಗೆ ತೋರಿಸುತ್ತದೆ.
ಟ್ರೂಕಾಲರ್ ತನ್ನ CallKit ಡೈರೆಕ್ಟರಿ ಗಾತ್ರವನ್ನು ದ್ವಿಗುಣಗೊಳಿಸಿದೆ ಮತ್ತು ಸ್ಪ್ಯಾಮ್, ಹಗರಣ ಮತ್ತು ವಂಚನೆ ಕರೆಗಳನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಲುವಾಗಿ ತನ್ನ ಸ್ಪ್ಯಾಮ್ ಪತ್ತೆ ಅಲ್ಗಾರಿದಮ್ ಅನ್ನು ಸುಧಾರಿಸಿದೆ. ಟ್ರೂಕಾಲರ್ ಆ್ಯಪ್ ಭಾರತದಲ್ಲಿ 33 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ವಂಚನೆ ಹಾಗೂ ಸ್ಪ್ಯಾಮ್ ಕರೆಗಳ ಸಂಖ್ಯೆ ಈಗಲೂ ಭಾರತದಲ್ಲಿ ಅಧಿಕವಾಗಿರುವ ಕಾರಣದಿಂದ ಜನತೆ ಟ್ರೂಕಾಲರ್ನಂಥ ಕಾಲರ್ ಐಡಿ ಆ್ಯಪ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.