ಬೆಂಗಳೂರು:2023 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20ರ ಗುರುವಾರದಂದು ಗೋಚರಿಸಲಿದೆ. ಈ ಸೂರ್ಯಗ್ರಹಣವು ವಿಶಿಷ್ಟ ಹೈಬ್ರಿಡ್ ಗ್ರಹಣವಾಗಿರುವುದರಿಂದ ಇದು ಅಪರೂಪದ ಆಕಾಶದ ಘಟನೆಯಾಗಿದೆ. ಹೈಬ್ರಿಡ್ ಸೂರ್ಯ ಗ್ರಹಣವು ಶತಮಾನದಲ್ಲಿ ಕೆಲವೇ ಬಾರಿ ಸಂಭವಿಸುತ್ತದೆ. ಈ ಹಿಂದಿನ ಹೈಬ್ರಿಡ್ ಸೂರ್ಯಗ್ರಹಣವು 2013 ರಲ್ಲಿ ಸಂಭವಿಸಿತ್ತು ಮತ್ತು ಮತ್ತೆ 2031 ರಲ್ಲಿ ಇಂತ ಗ್ರಹಣ ಸಂಭವಿಸಲಿದೆ. ಮುಂದಿನ ಶತಮಾನದಲ್ಲಿ ಮಾರ್ಚ್ 23, 2164 ರಂದು ಹೈಬ್ರಿಡ್ ಸೌರ ಗ್ರಹಣ ಸಂಭವಿಸಲಿದೆ ಎಂದು ತಿಳಿದು ಬಂದಿದೆ. ಈ ತಿಂಗಳು ಸಂಭವಿಸಲಿರುವ ಸೂರ್ಯಗ್ರಹಣವು 2023 ರ ಮೊದಲ ಗ್ರಹಣವಾಗಿದೆ. ಭಾರತದಲ್ಲಿ ಜನರು ಸೂರ್ಯಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯೋಣ ಬನ್ನಿ.
ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?: 2023 ರ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳು ಮಾತ್ರ ಅಪರೂಪದ ಹೈಬ್ರಿಡ್ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿವೆ. ಏತನ್ಮಧ್ಯೆ, ಭಾರತೀಯ ಮತ್ತು ಪೆಸಿಫಿಕ್ ಸಾಗರಗಳಲ್ಲಿ 'ಬೆಂಕಿಯ ಉಂಗುರ' ಕೆಲವು ಸೆಕೆಂಡುಗಳ ಕಾಲ ಗೋಚರಿಸಲಿದೆ.
ಚಂದ್ರನು ಸೂರ್ಯನ ಕೇಂದ್ರವನ್ನು ಮಾತ್ರ ಆವರಿಸಿದಾಗ 'ಬೆಂಕಿಯ ಉಂಗುರ' ಸಂಭವಿಸುತ್ತದೆ ಮತ್ತು ಅದರ ಹೊರ ಅಂಚುಗಳು ಚಂದ್ರನ ಸುತ್ತಲೂ ಬೆಂಕಿಯ ಉಂಗುರ ರೂಪಿಸಿದಂತೆ ಗೋಚರಿಸುತ್ತವೆ. ಈ ಎರಡು ಸ್ಥಳಗಳು ಆನ್ಯುಲಾರ್‌ನಿಂದ ಟೋಟಲ್‌ಗೆ ಗ್ರಹಣ ಪರಿವರ್ತನೆಗೆ ಸಾಕ್ಷಿಯಾಗುತ್ತವೆ. ನಂತರ ಮತ್ತೆ ಆನ್ಯುಲಾರ್‌ಗೆ ಪರಿವರ್ತನೆಗೊಳ್ಳುತ್ತವೆ. ಎಕ್ಸ್‌ಮೌತ್ (ಪಶ್ಚಿಮ ಆಸ್ಟ್ರೇಲಿಯಾ), ಟಿಮೋರ್ ಲೆಸ್ಟೆ ಮತ್ತು ವೆಸ್ಟ್ ಪಪುವಾ (ಇಂಡೋನೇಷ್ಯಾ) ಸೇರಿದಂತೆ ಭೂಮಿಯ ಮೇಲಿನ ಮೂರು ಸ್ಥಳಗಳಲ್ಲಿ ಮಾತ್ರ ಸಂಪೂರ್ಣ ಗ್ರಹಣ ಗೋಚರಿಸುತ್ತದೆ. ಭಾರತೀಯ ಕಾಲಮಾನದ ಪ್ರಕಾರ (IST), ಸೂರ್ಯಗ್ರಹಣವು ಬೆಳಗ್ಗೆ 7:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ.