ನವದೆಹಲಿ: ಭಾರತದಲ್ಲಿ ಮೂರು ಮಿಲಿಯನ್ ಜನರು ಹಿಮನದಿ ಸರೋವರಗಳಿಂದ ಉಂಟಾಗುವ ಪ್ರವಾಹದ ಅಪಾಯದಲ್ಲಿದ್ದಾರೆ. ಈ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಯುನೈಟೆಡ್ ಕಿಂಗಡಮ್ನ ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ಅಂತಾರಾಷ್ಟ್ರೀಯ ತಂಡವು ನಡೆಸಿದ ಈ ಅಧ್ಯಯನವು ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್‌ಗಳ (GLOF) ಹೆಚ್ಚಿನ ಅಪಾಯದಲ್ಲಿರುವ ಪ್ರದೇಶಗಳ ಬಗೆಗಿನ ಮೊದಲ ಜಾಗತಿಕ ಮೌಲ್ಯಮಾಪನವಾಗಿದೆ.
ಮಂಗಳವಾರ ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿದೆ. ನಿರ್ಗಲ್ಲು ಸರೋವರಗಳಿಂದ ಉಂಟಾಗುವ ಪ್ರವಾಹದಿಂದ ಪ್ರಪಂಚದಾದ್ಯಂತ 15 ಮಿಲಿಯನ್ ಜನರು ಅಪಾಯದಲ್ಲಿದ್ದಾರೆ ಎಂದು ಈ ಸಂಶೋಧನೆ ಅಂದಾಜಿಸಿದೆ.
ಇಂಥ ಪ್ರವಾಹಗಳು ಹೆಚ್ಚಾಗಿ ಉಂಟಾಗುವ ಪ್ರದೇಶಗಳಲ್ಲಿ ಅವನ್ನು ತಗ್ಗಿಸುವಿಕೆಯ ಆದ್ಯತೆಯನ್ನು ಗುರುತಿಸಿದ ಸಂಶೋಧಕರು, ಜಾಗತಿಕವಾಗಿ ಇಂಥ ಪ್ರವಾಹದಿಂದ ಹೆಚ್ಚು ಅಪಾಯಕ್ಕೀಡಾಗಬಹುದಾದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಭಾರತ, ಪಾಕಿಸ್ತಾನ, ಪೆರು ಮತ್ತು ಚೀನಾ ಈ ನಾಲ್ಕು ದೇಶಗಳಲ್ಲೇ ಇದ್ದಾರೆ. ಭಾರತ ಮತ್ತು ಪಾಕಿಸ್ತಾನವು ಅತಿ ಹೆಚ್ಚು ಇಂಥ ಅಪಾಯದ ವಲಯದಲ್ಲಿ ವಾಸಿಸುವ ಜನರನ್ನು ಹೊಂದಿವೆ. ಈ ಸಂಖ್ಯೆ ಕ್ರಮವಾಗಿ ಸುಮಾರು ಮೂರು ಮಿಲಿಯನ್ ಮತ್ತು ಎರಡು ಮಿಲಿಯನ್ ಆಗಿದೆ. ಇದು ಜಾಗತಿಕ ಜನಸಂಖ್ಯೆಯ ಒಟ್ಟು ಮೂರನೇ ಒಂದು ಭಾಗದಷ್ಟು.
ನಿರ್ಗಲ್ಲು ಪ್ರವಾಹ ಉಂಟಾಗುವುದು ಹೇಗೆ?:ಭೂಮಿಯ ಹವಾಮಾನವು ಹೆಚ್ಚು ಬಿಸಿಯಾಗುತ್ತಿರುವ ಕಾರಣದಿಂದ ಹಿಮನದಿಗಳು ಹಿಮ್ಮೆಟ್ಟುತ್ತವೆ ಮತ್ತು ಹಿಮನದಿಯ ಮುಂಭಾಗದಲ್ಲಿ ಕರಗಿದ ನೀರು ಸಂಗ್ರಹಗೊಳ್ಳುತ್ತದೆ. ಇದರಿಂದ ಸರೋವರಗಳು ಉಂಟಾಗುತ್ತವೆ. ಈ ಸರೋವರಗಳು ಇದ್ದಕ್ಕಿದ್ದಂತೆ ಒಡೆದು ವೇಗವಾಗಿ ಹರಿಯುವ ಪ್ರವಾಹವನ್ನು ಉಂಟುಮಾಡಬಹುದು. ಅದು ಮೂಲ ಜಾಗದಿಂದ ಹೆಚ್ಚಿನ ದೂರದಲ್ಲಿ ಹರಡಬಹುದು. ಇದು ಕೆಲವು ಸಂದರ್ಭಗಳಲ್ಲಿ 120 ಕಿಲೋಮೀಟರ್‌ಗಳಿಗಿಂತ ಹೆಚ್ಚಾಗಿರಬಹುದು. ಪ್ರವಾಹಗಳು ಹೆಚ್ಚು ವಿನಾಶಕಾರಿಯಾಗಬಹುದು ಮತ್ತು ಆಸ್ತಿ, ಮೂಲಸೌಕರ್ಯ ಮತ್ತು ಕೃಷಿ ಭೂಮಿಯನ್ನು ಹಾನಿಗೊಳಿಸಬಹುದು ಮತ್ತು ಗಮನಾರ್ಹವಾದ ಜೀವಹಾನಿಗೆ ಕಾರಣವಾಗಬಹುದು.