ಲಂಡನ್ : ಪವನ ಶಕ್ತಿ ಮತ್ತು ಸೋಲಾರ್ ಇಂಧನಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವ ಕಾರಣದಿಂದ ಮರುಬಳಕೆ ಇಂಧನ ಮೂಲಗಳಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಪ್ರಮಾಣವೂ ಹೆಚ್ಚಾಗುತ್ತಿದೆ. ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲು, ತೈಲ ಮತ್ತು ಅನಿಲದ ಬಳಕೆಯು 2023 ರಲ್ಲಿ ಕುಸಿಯುವ ನಿರೀಕ್ಷೆಯಿದೆ ಎಂದು ಎನರ್ಜಿ ಥಿಂಕ್ ಟ್ಯಾಂಕ್ ಎಂಬರ್ ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತ ಅಥವಾ ಕೋವಿಡ್ ಸಾಂಕ್ರಾಮಿಕ ಪೀಡಿತ ವರ್ಷಗಳ ಹೊರತಾಗಿ ವಿದ್ಯುತ್ ಉತ್ಪಾದಿಸಲು ಪಳೆಯುಳಿಕೆ ಇಂಧನಗಳ (ಪೆಟ್ರೋಲ್ ಹಾಗೂ ಡೀಸೆಲ್ ರೀತಿಯ ಇಂಧನ) ಬಳಕೆಯಲ್ಲಿ ಕುಸಿತವನ್ನು ಕಾಣುವ ಮೊದಲ ವರ್ಷವಾಗಿ ಇದು ಗುರುತಿಸಲ್ಪಡುತ್ತದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಪಳೆಯುಳಿಕೆ ಇಂಧನ ಬಳಸಿ ವಿದ್ಯುಚ್ಛಕ್ತಿ ಉತ್ಪಾದನೆಯಿಂದ ಭೂಮಿಯ ತಾಪಮಾನ ಹೆಚ್ಚಳ ಆಗಲೇ ಉತ್ತುಂಗಕ್ಕೇರಿದೆ ಎಂದು ಹೇಳಲಾಗಿದೆ.
ಕ್ಲೀನ್ ಪವರ್ ಯುಗದತ್ತ..: ಈ ಜಗತ್ತು ಪಳೆಯುಳಿಕೆ ಇಂಧನಗಳ ಯುಗದ ಅಂತ್ಯದ ಆರಂಭವನ್ನು ತಲುಪಿದೆ ಎಂದು ಸಂಶೋಧನೆಯ ಪ್ರಮುಖ ಲೇಖಕ ಮಾಲ್ಗೊರ್ಜಾಟಾ ವಿಯಾಟ್ರೋಸ್-ಮೊಟಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಕ್ಲೀನ್ ಪವರ್ ಯುಗವನ್ನು ಪ್ರವೇಶಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಎಂಬರ್ ಸಂಸ್ಥೆಯು ತನ್ನ ವಾರ್ಷಿಕ ಗ್ಲೋಬಲ್ ಇಲೆಕ್ಟ್ರಿಸಿಟಿ ರಿವ್ಯೂನ ನಾಲ್ಕನೇ ಆವೃತ್ತಿಗಾಗಿ ವಿದ್ಯುಚ್ಛಕ್ತಿಯ ಜಾಗತಿಕ ಬೇಡಿಕೆಯ 93 ಪ್ರತಿಶತವನ್ನು ಪ್ರತಿನಿಧಿಸುವ 78 ದೇಶಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ.
ಜಾಗತಿಕ ವಿದ್ಯುಚ್ಛಕ್ತಿಯ ಸುಮಾರು 40 ಪ್ರತಿಶತವು ಈಗ ನವೀಕರಿಸಬಹುದಾದ ಮತ್ತು ಪರಮಾಣು ಶಕ್ತಿಯಿಂದ ಉತ್ಪಾದಿಸಲ್ಪಡುತ್ತಿದೆ. ಇದು ಹೊಸ ದಾಖಲೆಯ ಮಟ್ಟವಾಗಿದೆ ಎಂದು ವರದಿ ತಿಳಿಸಿದೆ. ಗಾಳಿ ಮತ್ತು ಸೌರ ಶಕ್ತಿ ಬಳಸಿ ಉತ್ಪಾದಿಸಲಾದ ವಿದ್ಯುಚ್ಛಕ್ತಿಯ ಪ್ರಮಾಣವು 2022 ರಲ್ಲಿ ಜಾಗತಿಕ ಶಕ್ತಿ ಉತ್ಪಾದನೆಯ ಶೇಕಡಾ 12 ರಷ್ಟಿದೆ. ಇದು ಹಿಂದಿನ ವರ್ಷ ಶೇ 10 ಆಗಿತ್ತು. ಸೌರ ಶಕ್ತಿಯು 2022 ರಲ್ಲಿ ಸತತವಾಗಿ 18 ನೇ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿರುವ ವಿದ್ಯುಚ್ಛಕ್ತಿಯ ಮೂಲವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 24 ರಷ್ಟು ಏರಿಕೆಯಾಗಿದೆ. ಗಾಳಿಯಿಂದ ವಿದ್ಯುತ್ ಉತ್ಪಾದನೆ ಪ್ರಮಾಣ ಶೇ 17ರಷ್ಟು ಹೆಚ್ಚಿದೆ.