ವಾಷಿಂಗ್ಟನ್ :ಅಮೆರಿಕದ ಖಾಸಗಿ ಬಾಹ್ಯಾಕಾಶ ಆವಾಸಸ್ಥಾನ ಕಂಪನಿ ಆಕ್ಸಿಯಮ್ ಸ್ಪೇಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತನ್ನ ಎರಡನೇ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿತು. ಈ ಬಾಹ್ಯಾಕಾಶ ನೌಕೆಯಲ್ಲಿ ಪ್ರಪ್ರಥಮ ಬಾರಿಗೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿರುವುದು ವಿಶೇಷ. ಆಕ್ಸಿಯಮ್ ಮಿಷನ್ 2 (Ax-2) ನೌಕೆಯು 5:37 pm EDT ಭಾನುವಾರ (ಸೋಮವಾರ ಬೆಳಗ್ಗೆ 3:07 IST) ಸಮಯದಲ್ಲಿ ನಾಸಾದ ಫ್ಲೊರಿಡಾದ ಕೆನೆಡಿ ಸ್ಪೇಸ್ ಸೆಂಟರ್‌ನಲ್ಲಿನ ಲಾಂಚ್ ಕಾಂಪ್ಲೆಕ್ಸ್ನಿಂದ ಸ್ಪೇಸ್ ಎಕ್ಸ್ 9 ರಾಕೆಟ್ ಮೂಲಕ ಉಡಾವಣೆಗೊಂಡಿತು.
Ax-2 ಮಿಷನ್ ಖಾಸಗಿ ಗಗನಯಾತ್ರಿಗಳು ಮತ್ತು ವಿದೇಶಿ ಸರ್ಕಾರಗಳನ್ನು ಪ್ರತಿನಿಧಿಸುವ ಗಗನಯಾತ್ರಿಗಳನ್ನು ಒಳಗೊಂಡಿರುವ ಮೊದಲ ವಾಣಿಜ್ಯ ಮಾನವ ಬಾಹ್ಯಾಕಾಶ ಯಾನವಾಗಿದೆ. ಜೊತೆಗೆ ಮಹಿಳೆಯ ನೇತೃತ್ವದಲ್ಲಿ ಮೊದಲ ಖಾಸಗಿ ಮಿಷನ್ ಆಗಿದೆ. ಆಕ್ಸಿಯಮ್ ಸ್ಪೇಸ್‌ನ ಹ್ಯೂಮನ್ ಸ್ಪೇಸ್‌ಫ್ಲೈಟ್‌ನ ನಿರ್ದೇಶಕ ಪೆಗ್ಗಿ ವಿಟ್ಸನ್, ಮಾಜಿ NASA ಗಗನಯಾತ್ರಿ ಮತ್ತು ISS ಕಮಾಂಡರ್ ಈ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ ಮತ್ತು ಏವಿಯೇಟರ್ ಜಾನ್ ಶಾಫ್ನರ್ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸೌದಿ ಅರೇಬಿಯಾದ ಅಲಿ ಅಲ್ಕರ್ನಿ ಮತ್ತು ರಯಾನಾ ಬರ್ನಾವಿ ಈ ಇಬ್ಬರು ಮಿಷನ್ ತಜ್ಞರಾಗಿದ್ದಾರೆ.
Axiom, SpaceX, ಮತ್ತು Axiom ಮಿಷನ್ 2 ಸಿಬ್ಬಂದಿಗೆ ಯಶಸ್ವಿ ಉಡಾವಣೆಗಾಗಿ ಅಭಿನಂದನೆಗಳು! ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ Ax-2 ಗಗನಯಾತ್ರಿಗಳು 20 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ಬಾಹ್ಯಾಕಾಶ ವಿಕಿರಣ, ಹವಾಮಾನ, ಕಡಿಮೆ ಗುರುತ್ವಾಕರ್ಷಣೆಯ ಪರಿಸ್ಥಿತಿಗಳು ಮತ್ತು ಇನ್ನಷ್ಟು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರು ನಮಗೆ ಸಹಾಯ ಮಾಡಲಿದ್ದಾರೆ ಎಂದು NASA ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.