ಹೈದರಾಬಾದ್: ಅಮೆರಿಕದಲ್ಲಿ ಗೂಗಲ್ ಪೇ ಸೇವೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಅನೇಕ ಜನರಿಗೆ ಬಹುಮಾನದ ರೂಪದಲ್ಲಿ ದೊಡ್ಡ ಪ್ರಮಾಣದ ಹಣ ಸಂದಾಯವಾಗಿದೆ. ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ನ ಪಾವತಿ ಅಪ್ಲಿಕೇಶನ್ ಆಗಿರುವ ಗೂಗಲ್ ಪೇ ತನ್ನ ಬಳಕೆದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಒದಗಿಸುವುದಕ್ಕೆ ಹೆಸರಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಹುಮಾನದ ಬದಲು 'ಮುಂದಿನ ಬಾರಿ ಶುಭವಾಗಲಿ' (better luck next time) ಎಂಬ ಸಂದೇಶ ಕಾಣಿಸುವುದು ಸಹಜ. ಆದರೆ, ಈಗ ಅದನ್ನು ಸ್ಕ್ರಾಚ್ ಮಾಡಿದ ಕೆಲವರ ಖಾತೆಗೆ 80 ಸಾವಿರ ರೂ.ವರೆಗೆ ಹಣ ಜಮೆಯಾಗಿದ್ದು ಅಚ್ಚರಿ ಮೂಡಿಸಿದೆ.
ಗೂಗಲ್ ಪೇ ನಲ್ಲಿನ ಸಣ್ಣ ತಾಂತ್ರಿಕ ದೋಷದಿಂದಾಗಿ ಇದು ಸಂಭವಿಸಿದೆ. ಆದರೆ ಇದು ನಡೆದಿರುವುದು ಭಾರತದಲ್ಲಿ ಅಲ್ಲ, ಅಮೆರಿಕದಲ್ಲಿ. ಗೂಗಲ್ ಪೇ ನಲ್ಲಿನ ದೋಷದಿಂದಾಗಿ ಅಮೆರಿಕದಲ್ಲಿನ ಕೆಲವು ಪಿಕ್ಸೆಲ್ ಫೋನ್ ಬಳಕೆದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಬಹುಮಾನ ಬಂದಿವೆ. 10 ಡಾಲರ್‌ಗಳಿಂದ ಪ್ರಾರಂಭಿಸಿ ಕೆಲವರಿಗೆ 1,000 ಡಾಲರ್‌ಗಳವರೆಗೆ ಜಮಾ ಮಾಡಲಾಗಿದೆ. ಕೆಲ ಬಳಕೆದಾರರು ಈ ಬಗ್ಗೆ Reddit ನಲ್ಲಿ ಬರೆದಿದ್ದಾರೆ.
16 ವಹಿವಾಟುಗಳ ಪೈಕಿ 10 ವಹಿವಾಟುಗಳಿಗೆ ಕ್ಯಾಶ್‌ಬ್ಯಾಕ್ ಸಿಕ್ಕಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಇನ್ನು ಕೆಲವರು 100 ಡಾಲರ್ ಪಡೆದಿರುವುದಾಗಿ ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರ ತನಗೆ 240 ಡಾಲರ್ ಸಿಕ್ಕಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಒಂದೇ ಬಾರಿಗೆ ತಮಗೆ 1,072 ಡಾಲರ್ ಬಂದಿವೆ ಎಂದಿದ್ದಾರೆ. 1072 ಡಾಲರ್ ಎಂದರೆ ಭಾರತೀಯ ಕರೆನ್ಸಿಯಲ್ಲಿ 80,000 ರೂ. ಆಗುತ್ತದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಗೂಗಲ್ ಪೇನಲ್ಲಿ ತಮಗೂ ಏನಾದರೂ ಕ್ಯಾಶ್‌ಬ್ಯಾಕ್ ಸಿಗಬಹುದಾ ಎಂದು ಪ್ರಯತ್ನಿಸಿ ನೋಡಿದರು.