ನವದೆಹಲಿ:ಟಾಟಾ ಗ್ರೂಪ್ ಭಾರತದ ಅತಿದೊಡ್ಡ ಐಫೋನ್ ಜೋಡಣೆ ಘಟಕ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ತಮಿಳುನಾಡಿನ ಹೊಸೂರಿನಲ್ಲಿ ಈ ಬೃಹತ್ ಕಾರ್ಖಾನೆ ತಲೆ ಎತ್ತಲಿದೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ. ವರದಿಗಳ ಪ್ರಕಾರ, ಈ ಕಾರ್ಖಾನೆಯಲ್ಲಿ ಸುಮಾರು 20 ಅಸೆಂಬ್ಲಿ ಲೈನ್‌ಗಳಿರುವ ಸಾಧ್ಯತೆಯಿದೆ ಮತ್ತು ಎರಡು ವರ್ಷಗಳಲ್ಲಿ 50,000 ಕಾರ್ಮಿಕರನ್ನು ಟಾಟಾ ಗ್ರೂಪ್ ನೇಮಿಸಿಕೊಳ್ಳಲಿದೆ. ಈ ಘಟಕ 12ರಿಂದ 18 ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ದಕ್ಷಿಣ ಏಷ್ಯಾದ ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ವಿಸ್ತರಿಸುವ ಆ್ಯಪಲ್‌ನ ಗುರಿಯ ಭಾಗವಾಗಿ ಈ ಘಟಕ ಆರಂಭವಾಗಲಿದೆ. ಆದಾಗ್ಯೂ, ಟಾಟಾ ಗ್ರೂಪ್ ಅಥವಾ ಆ್ಯಪಲ್ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಟಾಟಾ ಈಗಾಗಲೇ ಕರ್ನಾಟಕದಲ್ಲಿ ಐಫೋನ್ ಉತ್ಪಾದನೆ ಮಾಡುತ್ತಿದ್ದ ವಿಸ್ಟ್ರಾನ್ ಕಾರ್ಪ್ ಕಂಪನಿಯನ್ನು ಖರೀದಿಸಿ ನಿರ್ವಹಿಸುತ್ತಿದೆ.
ಆ್ಯಪಲ್ ಚೀನಾದಲ್ಲಿನ ತನ್ನ ಉತ್ಪಾದನೆಯನ್ನು ಕಡಿಮೆ ಮಾಡಿ ಭಾರತ, ಥಾಯ್ಲೆಂಡ್, ಮಲೇಷ್ಯಾ ಮತ್ತು ಇತರ ಪ್ರದೇಶಗಳಲ್ಲಿ ಉತ್ಪಾದನೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರಸ್ತಾವಿತ ಹೊಸ ಐಫೋನ್ ಕಾರ್ಖಾನೆಯು ಮಧ್ಯಮ ಗಾತ್ರದ್ದಾಗಿರುತ್ತದೆ. ಸದ್ಯ 10,000 ಜನ ಕೆಲಸ ಮಾಡುತ್ತಿರುವ ವಿಸ್ಟ್ರಾನ್‌ಗಿಂತ ದೊಡ್ಡದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ಆ್ಯಪಲ್ ಭಾರತದಲ್ಲಿ ವರ್ಷಕ್ಕೆ 50 ದಶಲಕ್ಷಕ್ಕೂ ಹೆಚ್ಚು ಐಫೋನ್ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ.