ನವದೆಹಲಿ:ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಸ್ಯಾನ್ ಫ್ರಾನ್ಸಿಸ್ಕೋದ ಬೀದಿಯೊಂದರಲ್ಲಿ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಆಕಸ್ಮಾತ್ ಆಗಿ ಭೇಟಿಯಾಗಿರುವ ವಿಷಯ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತದಲ್ಲಿ ರಿಟೂಲ್ ಹೆಸರಿನ ಕಂಪನಿಯ ವಿಭಾಗವೊಂದರ ಮುಖ್ಯಸ್ಥರಾಗಿರುವ ಸಿದ್ ಪುರಿ ಎಂಬುವರು ತಾವು ಸುಂದರ್ ಪಿಚೈ ಅವರನ್ನು ಭೇಟಿಯಾದ ಚಿತ್ರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೋಟೋದಲ್ಲಿ ಪಿಚೈ ನೀಲಿ ಜೀನ್ಸ್, ಜಾಕೆಟ್ ಮತ್ತು ಕಪ್ಪು ಸನ್ಗ್ಲಾಸ್ ಧರಿಸಿದ್ದಾರೆ. ಪಿಚೈ ಸುತ್ತಲೂ ಯಾವುದೇ ಭದ್ರತಾ ಸಿಬ್ಬಂದಿಯೂ ಕಾಣಿಸುವುದಿಲ್ಲ. ಆದರೆ ಪಿಚೈ ಅವರೊಂದಿಗೆ ಓರ್ವ ಭದ್ರತಾ ಸಿಬ್ಬಂದಿ ಇದ್ದರು ಮತ್ತು ಅವರೇ ಫೋಟೊ ತೆಗೆದಿದ್ದು ಎಂದು ಸಿದ್ ಪುರಿ ಹೇಳಿದ್ದಾರೆ. ಪುರಿ ಅವರ ಎಕ್ಸ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾವಿರಾರು 'ಲೈಕ್' ಮತ್ತು ಕಾಮೆಂಟ್ಗಳು ಇದಕ್ಕೆ ಬಂದಿವೆ. ಈ ಚಿತ್ರವನ್ನು ಎಕ್ಸ್ನಲ್ಲಿ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ ಭೇಟಿ ಹೇಗೆ ನಡೆಯಿತು ಎಂಬ ಬಗ್ಗೆ ನೂರಾರು ಪ್ರಶ್ನೆಗಳನ್ನು ಬಳಕೆದಾರರು ಕೇಳುತ್ತಿದ್ದಾರೆ.
"ವಾಹ್. ಅವರು ಯಾವುದೇ ಭದ್ರತೆಯಿಲ್ಲದೆ ರಸ್ತೆಯಲ್ಲಿ ನಡೆದಾಡುತ್ತಾರಾ?? ಅವರು ತುಂಬಾ ಸರಳವಾಗಿರುವುದನ್ನು ನೊಡಿದರೆ ಸಂತೋಷವಾಗುತ್ತಿದೆ." ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. "ಇಲ್ಲ. ಅವರು ಭದ್ರತಾ ಸಿಬ್ಬಂದಿಯನ್ನು ಹೊಂದಿದ್ದರು. ಅವರೇ ಫೋಟೊ ತೆಗೆದಿದ್ದು" ಎಂದು ಪುರಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. "ಅವರು ಪಿಕ್ಸೆಲ್ 8 ಅನ್ನು ಬಳಸುತ್ತಿದ್ದರೇ?" ಎಂದು ಇನ್ನೊಬ್ಬ ಬಳಕೆದಾರರು ಕೇಳಿದ್ದಾರೆ. "ಅದರ ಬಗ್ಗೆ ಗೊತ್ತಿಲ್ಲ" ಎಂದು ಪುರಿ ಉತ್ತರಿಸಿದ್ದಾರೆ.
ಅಕ್ಟೋಬರ್ 24, 2015 ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಿಸಲಾಯಿತು. ಹಿಂದಿನ ಸಿಇಒ ಲ್ಯಾರಿ ಪೇಜ್ ಅವರು ಆಲ್ಫಾಬೆಟ್ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ನಂತರ ಡಿಸೆಂಬರ್ 3, 2019 ರಂದು ಪಿಚೈ ಕೂಡ ಆಲ್ಫಾಬೆಟ್ನ ಸಿಇಒ ಆದರು. ಪಿಚೈ 2022 ರಲ್ಲಿ ಕಂಪನಿಯಿಂದ ಪರಿಹಾರ ಭತ್ಯೆಯಾಗಿ ಸುಮಾರು 226 ಮಿಲಿಯನ್ ಡಾಲರ್ ಪಡೆದರು. ಈ ಮೂಲಕ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಪೊರೇಟ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸುಂದರ್ ಪಿಚೈ ಅವರಿಗೆ 2022 ರಲ್ಲಿ ಭಾರತ ಸರ್ಕಾರ ನೀಡುವ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ನೀಡಲಾಯಿತು.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಬಡತನ ಹೆಚ್ಚಳ - ಶೇ 40ರಷ್ಟು ಜನ ಬಡತನ ರೇಖೆಯ ಕೆಳಗೆ; ವಿಶ್ವಬ್ಯಾಂಕ್